ಮಂಗಳೂರು: ನೂರಾನು ಕನಸುಗಳನ್ನು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಕುಳಿತು ಆಕಾಶದಲ್ಲಿ ತೇಲಾಡುತ್ತಿದ್ದ ಪ್ರಯಾಣಿಕರಿಗೆ ತಾವು ಕೆಲವೇ ಹೊತ್ತಲ್ಲಿ ಬೂದಿಯಾಗುತ್ತೇವೆ ಎಂಬ ಸಣ್ಣ ಅರಿವೂ ಕೂಡಾ ಇರಲಿಲ್ಲ. ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಗುರುತೂ ಸಿಗದಂತೆ ಸುಟ್ಟು ಕರಕಲಾರದರು. ಒಬ್ಬೊಬ್ಬರದು ಒಂದೊಂದು ಕಣ್ಣಿರ ಕತೆಗಳು.
ಫೇವರೇಟ್ ಲಕ್ಕಿ ಸಂಖ್ಯೆಯ ದಿನವೇ ಮೃತಪಟ್ಟ ರೂಪಾನಿ
ಗುಜರಾತ್ ಮಾಜಿ ಸಿಂಎ ವಿಜಯ್ ರೂಪಾನಿ ಅವರು ಖರೀದಿಸಿದ ಮೊದಲ ವಾಹನದ ಸಂಖ್ಯೆ 1206. ಇದು ತಮ್ಮ ಫೇವರೇಟ್ ಸಂಖ್ಯೆ ಎಂದು ಭಾವಿಸಿದ ರೂಪಾನಿ ಅವರು ನಂತರ ಖರೀದಿಸಿದ ವಾಹನಗಳಿಗೆ ಈ ಸಂಖ್ಯೆಯ ನಂಬರ್ ಅನ್ನೇ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ದಿನಾಂಕ 12 ಮತ್ತು 6ನೇ ತಿಂಗಳು (1206) ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ರೂಪಾನಿ ಅವರ ಬಳಿ ಎರಡು ಕಾರು ಇತ್ತು. ಇನ್ನೋವಾ ಕಾರಿನ ಸಂಖ್ಯೆ GJ-03-ER-1206 ಆಗಿದ್ದರೆ ಮಾರುತಿ ವಾಗನರ್ ಕಾರಿನ ಸಂಖ್ಯೆ GJ-03-HK-1206 ಆಗಿತ್ತು. ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್ ರೂಪಾನಿ 12 A ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಮಗಳ ಮನೆಗೆ ಪತ್ನಿ 6 ತಿಂಗಳ ಹಿಂದೆ ತೆರಳಿದ್ದರು. ಪತ್ನಿಯನ್ನು ಕರೆ ತರುವ ಉದ್ದೇಶದಿಂದ ರೂಪಾನಿ ಪ್ರಯಾಣ ಬೆಳೆಸಿದ್ದರು. ಪಕ್ಕದಲ್ಲಿ ಕೂತಿದ್ದ ಸಹ ಪ್ರಯಾಣಿಕೆ ಅವರ ಜೊತೆ ತೆಗೆದುಕೊಂಡಿದ್ದ ಕೊನೆಯ ಸೆಲ್ಫಿ ಇದಾಗಿತ್ತು.
ಅಮ್ಮನೊಂದಿಗೆ ಕೊನೆಯ ಫೋಟೋ
ಗುಜರಾತ್‌ನ ಮಣಿನಗರ ನಿವಾಸಿ ಲಾರೆನ್ಸ್ ಡೇನಿಯಲ್ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ತಮ್ಮ ತೀರಿಕೊಂಡ ಹಿನ್ನೆಲೆ ಮಣಿನಗರಕ್ಕೆ ಆಗಮಿಸಿದ್ದರು. ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಲಾರೆನ್ಸ್ ಡೇನಿಯಲ್ ತಮ್ಮ ಬದುಕಿನ ಯಾತ್ರೆಯನ್ನೇ ಮುಗಿಸಿದ್ದಾರೆ. ಇತ್ತ ಗಂಡನ ಕಳೆದುಕೊಂಡ ದುಃಖ ಮಾಸುವ ಮುನ್ನವೇ ಮಗನನ್ನು ಕಳೆದುಕೊಂಡ ತಾಯಿ ಮತ್ತೆ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಸಾವಿಗೂ ಮುನ್ನ ಏರ್‌ಪೋರ್ಟ್‌ನಲ್ಲಿ ಮಗನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವಷ್ಟೇ ತಾಯಿ ಬಳಿ ನೆನಪಾಗಿ ಉಳಿದಿದೆ.
ಅಣ್ಣ ತಂಗಿ ದುರಂತ ಅಂತ್ಯ
ಪತನಗೊಂಡ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದ ಅಣ್ಣ-ತಂಗಿ ದುರಂತ ಅಂತ್ಯ ಕಂಡಿದ್ದಾರೆ. ಅಣ್ಣ ಶಗುನ್ ಮತ್ತು ತಂಗಿ ಶುಭಾ ಇಬ್ಬರೂ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಉದಯಪುರದವರಾಗಿ ಇವರು ಎಂಬಿಎ ಮುಗಿಸಿದ್ದರು. ಇವರು ಮಾರ್ಬಲ್ ವ್ಯಾಪಾರಿ ಪಿಂಕು ಮೋದಿ ಅವರ ಮಕ್ಕಳು. ತಂದೆ ಜೊತೆ ಮಾರ್ಬಲ್ ಬ್ಯುಸಿನೆಸ್‌ಗೆ ಸೇರಿದ್ದರು. ಅಣ್ಣ-ತಂಗಿ ಇಬ್ಬರೂ ಲಂಡನ್ ಪ್ರವಾಸಕ್ಕೆ ಹೊರಟಿದ್ದರು. ಆದರೆ, ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕನಸಿನ ಮನೆಗೆ ಕಾಲಿಡುವ ಮುನ್ನವೇ ಅಂತ್ಯ ಕಂಡ ರಂಜಿತಾ
ಲಂಡನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ರಂಜಿತಾ ಅವರು ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ರಂಜಿತಾ ಗೋಪಕುಮಾರನ್ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ರಜೆ ಮುಗಿಸಿ ಕನಸಿನ ಮನೆಗೆ ಕಾಲಿಡುವ ಮೊದಲೇ ನರ್ಸ್ ರಂಜಿತಾ ಸಾವಿನ ಮನೆ ಸೇರಿದ್ದಾರೆ.
42 ವರ್ಷದ ರಂಜಿತಾ ಪತಿ ವಿನೀಶ್, ಇಬ್ಬರು ಶಾಲಾ ಮಕ್ಕಳಾದ ರಿತಿಕಾ ಮತ್ತು ಇಂದುಚೂಡನ್ ಹಾಗೂ ತಾಯಿ ತುಳಸಿ ಅವರನ್ನು ಅಗಲಿದ್ದಾರೆ. ಪಂಚಾಯತ್ ಸದಸ್ಯ ಜಾನ್ಸನ್ ಥಾಮಸ್, ರಂಜಿತಾ ಮೂರು ದಿನಗಳ ಹಿಂದೆ ಯುಕೆಯಿಂದ ಮನೆಗೆ ಬಂದಿದ್ದರು. ಅವರಿಗೆ ರಾಜ್ಯ ಆರೋಗ್ಯ ಸೇವೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು. ಆದರೆ ಅವರ ಹೊಸ ಮನೆಯ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರು ಸುಮಾರು ಒಂದು ವರ್ಷದ ಹಿಂದೆ ಯುಕೆಗೆ ತೆರಳಿದಾಗಿನಿಂದ, ಅಲ್ಲಿ ತಮ್ಮ ಕೆಲಸದ ಒಪ್ಪಂದವನ್ನು ಪೂರ್ಣಗೊಳಿಸಲು ಬಯಸುತ್ತಿದ್ದರು. ಕೇರಳಕ್ಕೆ ಮರಳಲು ಮತ್ತು ರಾಜ್ಯ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡಲು ಯೋಜಿಸಿದ್ದರು. ಯುಕೆಗೆ ತೆರಳುವ ಮೊದಲು, ರಂಜಿತಾ ಎಂಟು ವರ್ಷಗಳ ಕಾಲ ಒಮಾನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು. ಅವರ ಪತಿ ಕೂಡ ಒಮಾನ್‌ನಲ್ಲಿದ್ದರು. ಆದರೆ ನಂತರ ಕೇರಳಕ್ಕೆ ಮರಳಿದರು. ಅದಾದ ಬಳಿಕ ರಂಜಿತಾ ಯುಕೆಗೆ ತೆರಳಿದ್ದರು. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸಿ ಲಂಡನ್‌ಗೆ ಹೊರಟ್ಟಿದ್ದರು. ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಈಗಾಗಲೇ ಮನೆಯ ಬಹುತೇಕ ಕೆಲಸ ಪೂರ್ಣಗೊಂಡಿತ್ತು. ಜುಲೈನಲ್ಲಿ ಗೃಹಪ್ರವೇಶದ ಪ್ಲ್ಯಾನ್ ಮಾಡಿಕೊಂಡಿದ್ದರು. ಮನೆಗೆ ಆಸರೆಯಾಗಿದ್ದ ರಂಜಿತಾ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಲಂಡನ್ ಕನಸು ಭಗ್ನ: ಒಂದೇ ಕುಟುಂಬದ ಐವರು ಸಾವು
ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದ ಸುಂದರ ಕುಟುಂಬವೊಂದು ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯಕಂಡಿದೆ. ಗಂಡ-ಹೆಂಡತಿ ಹಾಗೂ ಮೂರು ಮುದ್ದಾದ ಮಕ್ಕಳ ಒಂದೇ ದಿನ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್ ವೃತ್ತಿಯಲ್ಲಿದ್ದ ಪ್ರತೀಕ್ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಮೂರು ಮಕ್ಕಳು ಹಾಗೂ ಮಡದಿಯೊಂದಿಗೆ ಲಂಡನ್‌ನಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು.
ಮಕ್ಕಳು, ಮಡದಿಯನ್ನ ಲಂಡನ್‌ಗೆ ಕರೆಸಿಕೊಳ್ಳಲು ಹಲವು ವರ್ಷಗಳಿಂದ ಪ್ರತೀಕ್ ಕಾದಿದ್ದರು. ಕನಸು ಅಂತಿಮವಾಗಿ ನನಸಾಯಿತು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಡಾ. ಕೋಮಿ ವ್ಯಾಸ್ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಪ್ರತೀಕ್ ಜೊತೆ ಲಂಡನ್‌ಗೆ ಹೊರಡಲು ಸಜ್ಜಾಗಿದ್ದರು. ಗುರುವಾರ ಬೆಳಗ್ಗೆ ಭರವಸೆ ಮತ್ತು ಉತ್ಸಾಹದೊಂದಿಗೆ ಈ ಕುಟುಂಬ, ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಭಾರತದಲ್ಲಿ ತಮ್ಮ ಜೀವನದ ಕಡೆಯ ಸೆಲ್ಫಿಯನ್ನು ಕುಟುಂಬ ಕ್ಲಿಕ್ಕಿಸಿಕೊಂಡಿತ್ತು. ಆ ಸೆಲ್ಫಿಯನ್ನ ತನ್ನ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು. ಆದರೆ, ಕೆಲವೇ ಹೊತ್ತಿನಲ್ಲಿ ಅವರ ಕನಸು ನುಚ್ಚುನೂರಾಯಿತು.
ಇಷ್ಟದ ಕೋರ್ಸ್ ಮಾಡಲು ಹೊರಟಿದ್ದ ಪಾಯಲ್ ಖಾಟಿಕ್
ಲಂಡನ್‌ನಲ್ಲಿ ತನ್ನ ಇಷ್ಟದ ಕೋರ್ಸ್ ಮಾಡಲು ಹೊರಟಿದ್ದ ಪಾಯಲ್ ಖಾಟಿಕ್ ಅವರ ಕನಸು ಕೇವಲ 9 ಗಂಟೆಗಳ ಹಾರಾಟದ ದೂರದಲ್ಲಿತ್ತು! ಆದರೆ ಅವರ ಕನಸು, ಅವರ ದೇಹ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸುಟ್ಟು ಬೂದಿಯಾಯಿತು. ರಾಜಸ್ಥಾನದ ಉದಯಪುರದ ಯುವತಿ ಪಾಯಲ್, ಲಂಡನ್‌ಗೆ ತೆರಳಲು ಅಹಮದಾಬಾದ್‌ನಿಂದ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಆ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಈ ದುರಂತದಲ್ಲಿ ಅವರು ಸಾವಿಗೀಡಾಗಿದ್ದಾರೆ. ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು.
ಗಂಡನ ಸೇರುವ ಮುನ್ನವೇ..!
ವಿವಾಹದ ಬಳಿಕ ಗಂಡನ ಜೊತೆಗಿರಲು ಲಂಡನ್‌ಗೆ ಹೊರಟಿದ್ದ ನವವಿವಾಹಿತೆ ಕೂಡಾ ದುರಂತ ಅಂತ್ಯ ಕಂಡಿದ್ದಾರೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮೃತರು. ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್‌ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್ ಸಿಂಗ್ ಅವರು, ಆಶೀರ್ವಾದ ಮಗಳೇ Going to London ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ನನ್ನ ಕೊನೆ ರಾತ್ರಿ!
ಜೇಮೀ ಮೀಕ್ ಮತ್ತು ಫಿಯೊಂಗಲ್ ಗ್ರೀನ್‌ಲಾ ಎಂಬ ಇಬ್ಬರು ಬ್ರಿಟನ್ ಯುವಕರು, ಭಾರತ ಪ್ರವಾಸದ ಬಗ್ಗೆ ಕೆಲವು ವಿಷಯಗಳನ್ನ ಹಂಚಿಕೊಂಡು ಫ್ಲೈಟ್ ಹತ್ತಿದ್ದರು. ತಮ್ಮ ಗುಜರಾತ್ ಭೇಟಿ ಮುಗಿಸಿ, ಸ್ವದೇಶಕ್ಕೆ ಮರಳುವ ಮುನ್ನ ಭಾರತದಲ್ಲಿನ ತಮ್ಮ ಅನುಭವಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟ್‌ನಲ್ಲಿ, ಭಾರತದಲ್ಲಿನ ತಮ್ಮ ಅದ್ಭುತ ಅನುಭವಗಳನ್ನು ತಮ್ಮ ಗೆಳೆಯ ಫಿಯೊಂಗಲ್ ಗ್ರೀನ್‌ಲಾ-ಮೀಕ್ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ ಬುಧವಾರ ರಾತ್ರಿ ಇಂದು ಭಾರತದಲ್ಲಿ ನನ್ನ ಕೊನೆ ರಾತ್ರಿ ಎಂದು ಬೇಸರದಲ್ಲಿ ಹೇಳಿಕೊಂಡಿದ್ದರು. ಜೇಮೀ ಸ್ವದೇಶಕ್ಕೆ ಮರಳಲು ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಕೆಲವೇ ನಿಮಿಷಗಳ ಮುನ್ನ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತಕ್ಕೆ ವಿದಾಯ ಎಂದು ಹೇಳಿಕೊಂಡಿದ್ದರು.
ಕ್ಯಾಬಿನ್ ಸಿಬ್ಬಂದಿ ರೊಶ್ನಿ ರಾಜೇಂದ್ರ ಸೋಂಘರೆ
ಕ್ಯಾಬಿನ್ ಸಿಬ್ಬಂದಿ ಆಗಿದ್ದ ರೋಶ್ನಿ ರಾಜೇಂದ್ರ ಸೋಂಘರೆ ತುಂಬಾನೇ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಯಾಣಿಕರ ಸ್ನೇಹಿಯಾಗಿದ್ದ, ರೋಶ್ನಿ ಸೋಶಿಯಲ್ ಮೀಡಿಯಾ ಮೂಲಕವೂ ಸಕಷ್ಟು ಹೆಸರು ಮಾಡಿದ್ದರು. ಇವರು ಇನ್ಸ್ಟಾಗ್ರಾಮ್ನಲ್ಲಿ 54 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದರು. ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರ ಅಚ್ಚುಮೆಚ್ಚು ಆಗಿದ್ದರು. ಇವರು ಏರ್ ಇಂಡಿಯಾದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮೂಲತಹ ಮಹಾರಾಷ್ಟ್ರದವರಾಗಿದ್ದ ರೋಶ್ನಿ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಗಳ ಕಳೆದುಕೊಂಡ ಕುಟುಂಬದ ದುಃಖದ ಕಟ್ಟೆ ಒಡೆದಿದೆ. ರೋಶ್ನಿ ಅವರು ಅಹ್ಮದಾಬಾದ್ನಿಂದ ಹೊರಡುವ ಮುನ್ನ ಪೋಷಕರಿಂದ ಬೀಳ್ಕೊಡುಗೆ ಪಡೆದಿದ್ದರು. ಮಹಾರಾಷ್ಟ್ರದ ಮುಂಬೈನ ರಾಜಾಜಿ ಪಾತ್ನ ನವ ಉಮಿಯಾ ಕೃಪಾ ಸೊಸೈಟಿಯಲ್ಲಿ ರೋಶ್ನಿ ಪೋಷಕರು ವಾಸವಿದ್ದಾರೆ. ತಂದೆಯ ಹೆಸರು ರಾಜೇಂದ್ರ ತಾಯಿ ರಾಜಶ್ರಿ. ಇವರಿಗೆ ಓರ್ವ ಸಹೋದರನಿದ್ದು, ಆತನ ಹೆಸರು ವಿಘ್ನೇಶ್.
ಪ್ರೀತಿಯ ಅಜ್ಜಿ ಹುಟ್ಟುಹಬ್ಬಕ್ಕೆ ಲಂಡನ್ನಿಂದ ಬಂದಿದ್ದ ಅಕ್ಕ-ತಂಗಿ
ಅಜ್ಜಿಯ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಗುಜರಾತ್ ಮೂಲದ ಧೀರ್ ಮತ್ತು ಹೀರ್ ಬಾಕ್ಸಿ ಇಬ್ಬರು ಭಾಗಿಯಾಗಿ ಖುಷಿ ಖುಷಿಯಲ್ಲಿ ಕುಟುಂಬಸ್ಥರ ಜೊತೆಗೆ ಕಾಲ ಕಳೆದಿದ್ದರು. ಆದರೆ ಆ ಖುಷಿಯ ಕ್ಷಣ ಹೆಚ್ಚು ದಿನ ಉಳಿಯಲೇ ಇಲ್ಲ.
ಮಂಗಳೂರು ಮೂಲದ ಪೈಲಟ್
ದುರದೃಷ್ಟಕಾರಿ ವಿಮಾನದ ಸಹ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು. ಪ್ರಸಕ್ತ ಮುಂಬೈ ನಿವಾಸಿಯಾಗಿರುವ ಕ್ಲೈವ್ ಕುಂದರ್ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಕ್ಲೈವ್ ಕುಂದರ್ 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಟ್ರೈನೀ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಜೊತೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ ದುರ್ಘಟನೆಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಅಮ್ಮನಿಗೆ ತಿಂಡಿ ಕೊಡಲು ಬಂದಿದ್ದ ಆಕಾಶ್
ಬಿಜೆ ಹಾಸ್ಟೆಲ್‌ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ ಟೀ ಅಂಗಡಿಯ ಮುಂದೆ ನಿಂತಿದ್ದ. ಅಷ್ಟರಲ್ಲಿ ಬೆಂಕಿಯುಂಡೆಯಂತೆ ಬಿದ್ದ ವಿಮಾನದ ಬೆಂಕಿಯ ಕೆನ್ನಾಲಿಗೆ ಸಿಲುಕಿ ಆಕಾಶ್ ಸಾವನ್ನಪ್ಪಿದ್ದಾನೆ. ಆಕಾಶ್‌ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ತಾಯಿಯ ಆಕ್ರಂದನ ಮುಗಿಲು ಮುಟ್ಟಿತು.
ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದಳು
ಗುರುವಾರ ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಬಾರದ ಲೋಕಕ್ಕೆ ತೆರಳಿದ್ದಾಳೆ. ಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪನ್ವೆಲ್ ಮೂಲದ ಏರ್ ಇಂಡಿಯಾ ಗಗನಸಖಿ ಮೈಥಿಲಿ ಪಾಟೀಲ್ (24) ದುರಂತ ಅಂತ್ಯ ಕಂಡಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಮೈಥಿಲಿ ಅಪ್ಪನೊಂದಿಗೆ ಕೊನೆಯದ್ದಾಗಿ ಮಾತನಾಡಿ ಲಂಡನ್‌ಗೆ ತಲುಪಿದ ಕೂಡಲೇ ಕರೆ ಮಾಡುವುದಾಗಿ ತಿಳಿಸಿದ್ದಳು. ಮಗಳನ್ನು ನೆನೆದು ತಂದೆ ತಾಯಿ ಕೊರಗಿ ಕೊರಗಿ ಅಳುತ್ತಿದ್ದಾರೆ.