ಪಣಂಬೂರು: ಟ್ಯಾಂಕರ್‌ ಚಕ್ರಕ್ಕೆ ಸಿಲುಕಿ ಬೈಕ್‌ ಸಹ ಸವಾರ ಸಾವು, ಸವಾರ ಗಂಭೀರ

ಪಣಂಬೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾಗಿ ಸಹಸವಾರ ಟ್ಯಾಂಕರ್‌ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಸುರತ್ಕಲ್ ಕಾನ ಜನತಾ ಕಾಲನಿ‌ ನಿವಾಸಿ ಅಶ್ರಫ್ ಮೃತ ದುರ್ದೈವಿ. ಸವಾರ ಮುಲ್ಕಿ ಕೊಲ್ನಾಡು ನಿವಾಸಿ ಮುಹಮ್ಮದ್ ಶರೀಫ್ ಗಾಯಗೊಂಡಿದ್ದು, ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಶ್ರಫ್ ಮತ್ತು ಶರೀಫ್ ಅವರು ಮಂಗಳೂರು ಕಡೆಯಿಂದ ಸುರತ್ಕಲ್‌ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಹಾಸನದಿಂದ ಸುರತ್ಕಲ್ ಎಚ್‌ಪಿಸಿಎಲ್‌ಗೆ ಗ್ಯಾಸ್ ತುಂಬಲು ಹೋಗುತ್ತಿದ್ದ ಬುಲೆಟ್ ಟ್ಯಾಂಕರ್‌ನ ಪಾಶ್ವ ತಾಗಿದೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಕುಳಿತಿದ್ದ ಅಶ್ರಫ್ ರಸ್ತೆಗೆ ಎಸೆಯಲ್ಪಟ್ಟು ಢಿಕ್ಕಿ ಹೊಡೆದ ಬುಲೆಟ್‌ ಟ್ಯಾಂಕರ್‌ ಹಿಂಬದಿ ಬಿದ್ದಿದ್ದಾರೆ. ಈ ವೇಳೆ ಟ್ಯಾಂಕರ್‌ ಚಕ್ರ‌ ಅವರ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಶರೀಫ್ ಅವರಿಗೆ ಕೈ, ಕಾಲು ಹಾಗೂ ಎದೆಯ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಶ್ರಫ್ ಅವರ ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!