ಮಂಗಳೂರು: ನಿನ್ನೆ ಸಂಜೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಎಂಬಲ್ಲಿ ನಡೆದಿದ್ದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಮುಖ ಆರೋಪಿಯೊಬ್ಬನ ಸಹಿತ ಮೂವರನ್ನು ವಶಕ್ಕೆ ಪಡೆದಿರುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ. ಇನ್ನುಳಿದವರು ತಲೆಮರೆಸಿಕೊಂಡಿದ್ದು ಅವರನ್ನು ಶೋಧ ಕಾರ್ಯ ನಡೆಸಲಾಗುತ್ತಿದೆ.
ಪ್ರಕರಣದಲ್ಲಿ ಧನುಪೂಜೆಯ ಸುಮಿತ್ ಆಚಾರ್ಯ, ದೀಪಕ್ ಮತ್ತು 15 ಮಂದಿ ಭಾಗಿಯಾಗಿದ್ದಾರೆ ಎಂದು ನಿಸಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಅಬ್ದುಲ್ ರಹಿಮಾನ್ ಮತ್ತು ಖಲಂದರ್ ಶಾಫಿ ಅವರು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಮರಳನ್ನು ಇಳಿಸುವ ಸಂದರ್ಭ ಸ್ಥಳೀಯರಾದ ದೀಪಕ್, ಸಮೀತ್ ಮತ್ತು 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳಿಂದ ತಿವಿದು ಕಡಿದರು.ಆಗ ಪಕ್ಕದಲ್ಲಿದ್ದ ನಾನು ತಡೆಯಲು ಹೋದಾಗ ಚೂರಿಯಿಂದ, ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರ್ ನಿಂದ ಕಡಿದಿರುತ್ತಾರೆ. ಇದ್ದನ್ನು ಕಂಡು ಅಲ್ಲಿ ಜನ ಸೇರಿ ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆಗೈದ ಪೈಕಿ ಇಬ್ಬರು ಸ್ಥಳೀಯ ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಖಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.