ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು,ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಬೊಂಡಾಲ ಸರಕಾರಿ ಶಾಲೆಯನ್ನು ದತ್ತು ಪಡೆದು ‘ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ’ ಎಂಬ ಹೆಸರಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಲ್ಲದೆ ತಮ್ಮ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಿರುವ ಸಮಾಜ ಸೇವೆ ಮತ್ತು ಯಕ್ಷಗಾನ ಸೇವೆಗಾಗಿ ಸಚ್ಚಿದಾನಂದ ಶೆಟ್ಟರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಅಶೋಕ್ ಬಿ. ಹಿಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ್ ಎಚ್.ಎಲ್.ಎನ್.ರಾವ್ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಹಿರಿಯ ಚಲನಚಿತ್ರ ನಟಿಯರಾದ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಡಾ.ಜಯಮಾಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಪ್ರೇಮಕವಿ ಕೆ.ಕಲ್ಯಾಣ್ ಅತಿಥಿಗಳಾಗಿದ್ದರು.
ಸ್ವಾಗತ ಸಮಿತಿಯ ಡಾ.ಕೆ.ಎನ್. ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಮಂಗಳೂರು ಪ್ರತಿನಿಧಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು. ಉಪಸ್ಥಿತರಿದ್ದರು. ಸುಗ್ಗನಹಳ್ಳಿ ಷಡಕ್ಷರಿ ಹಾಗೂ ಸಾರ್ಥವಳ್ಳಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.