ಬೆಂಗಳೂರು: ನಟ ದರ್ಶನ್ ಪ್ರತೀ ತಿಂಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದರ ನಡುವೆ ದರ್ಶನ್ ತಮ್ಮ ಮೈಸೂರು ಫಾರಂ ಹೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದರು ಈ ಬಗ್ಗೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ವಿರುದ್ಧ ದೂರು ದಾಖಲಾಗಿದ್ದು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
‘ಬಾರ್ ಹೆಡೆಡ್ ಗೂಸ್’ ಎಂಬ ಬಾತುಕೋಳಿಗಳನ್ನು ಸಾಕಿದ್ದ ದರ್ಶನ್, ಕೆಂಪಯ್ಯನ ಹುಂಡಿಯ ನಟ ದರ್ಶನ್ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದ ಅಧಿಕಾರಿಗಳು, ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು. ಪ್ರಕರಣದ ವಿಚಾರಣೆಯು ನಡೆಯುತ್ತಿದ್ದು, ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದು ಜುಲೈ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
ಬಾರ್ ಹೆಡೆಡ್ ಗೂಸ್ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ಇವು ವಲಸೆ ಹಕ್ಕಿಗಳಾಗಿವೆ, ಈ ಹಕ್ಕಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎನಿಸಿಕೊಂಡಿದೆ. ಈ ಹಿಂದೆ ಪ್ರಕರಣ ದಾಖಲಾಗಿದ್ದಾಗ, ಬಾತುಕೊಳಿಗಳನ್ನು ಸ್ನೇಹಿತರು ನೀಡಿದ್ದರು ಎಂದು ದರ್ಶನ್ ಸ್ಪಷ್ಟನೆ ನೀಡಿದ್ದರು.