ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಕೆಯ ಬಂಧನ ಅವಧಿಯನ್ನು ನ್ಯಾಯಾಲಯ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಈಕೆಗಾಗಿ ವಕೀಲರನ್ನು ನೇಮಿಸಿಕೊಳ್ಳಲು ನನ್ನಲ್ಲಿ ಹಣವಿಲ್ಲ ಎಂದು ಈಕೆಯ ತಂದೆ ಹೇಳಿದ್ದಾರೆ.
ಬೆಳಿಗ್ಗೆ 9:30ಕ್ಕೆ ಹಿಸಾರ್ ಪೊಲೀಸರು ಜ್ಯೋತಿಯನ್ನು ನ್ಯಾಯಾಲಯಕ್ಕೆ ಕರೆತಂದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಯಿತು. ನಂತರ ಹಿಸಾರ್ ಪೊಲೀಸರು ಆಕೆಯನ್ನು 4 ದಿನಗಳ ಕಸ್ಟಡಿಗೆ ಪಡೆದರು. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾಳನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ.
ಜ್ಯೋತಿ ಪರವಾಗಿ ಪ್ರಕರಣದ ವಾದ ಮಂಡಿಸಲು ಇನ್ನೂ ಯಾವುದೇ ವಕೀಲರನ್ನು ನೇಮಿಸಲಾಗಿಲ್ಲ. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾ ಮಾತನಾಡಿ, ನನ್ನ ಬಳಿ ವಕೀಲರನ್ನು ನೇಮಿಸಿಕೊಳ್ಳಲು ಹಣವಿಲ್ಲ ಎಂದು ಹೇಳಿದ್ದಾರೆ. ನನಗೆ ವಕೀಲರನ್ನು ಹೇಗೆ ನೇಮಿಸಿಕೊಳ್ಳಬೇಕೆಂದು ತಿಳಿದಿಲ್ಲ. ಕಳೆದ ಐದು ದಿನಗಳಿಂದ ಮಾಧ್ಯಮ ಮತ್ತು ಪೊಲೀಸರನ್ನು ಹೊರತುಪಡಿಸಿ ಯಾರೂ ನನ್ನ ಮನೆಗೆ ಬರುತ್ತಿಲ್ಲ, ನೆರೆಹೊರೆಯವರು ಮತ್ತು ಸಂಬಂಧಿಕರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದರು.
ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಇಲಾಖೆಗಳು ಜ್ಯೋತಿ ಮಲ್ಹೋತ್ರಾಳನ್ನು ಪೊಲೀಸ್ ಕಸ್ಟಡಿಯಲ್ಲಿ ಮೂರು ದಿನಗಳ ಕಾಲ ವಿಚಾರಣೆ ಮುಂದುವರಿಸಿವೆ. ಈ ನಡುವೆ ಜ್ಯೋತಿ ಜೊತೆಗೆ ಸಂಪರ್ಕದಲ್ಲಿದ್ದ ಪಾಕ್ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಸರ್ಕಾರದಿಂದ ನಿಯೋಜನೆಗೊಂಡ ಅಧಿಕಾರಿಯಲ್ಲ, ಬದಲಿಗೆ ಆತ ಐಎಸ್‌ಐ ಏಜೆಂಟ್ ಎಂದು ತಿಳಿದು ಬಂದಿದೆ. ವೀಸಾ ಕೇಳಿಕೊಂಡು ಬರುವ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದ ಡ್ಯಾನಿಶ್ ಅವರ ಹಿನ್ನೆಲೆಯನ್ನು ತಿಳಿದುಕೊಂಡು ಆತನಿಗೆ ಆಮಿಷಗಳನ್ನೊಡ್ಡಿ ಬೇಹಗಾರಿಕೆ ಮಾಡಿಸುತ್ತಿದ್ದ ಜೊತೆಗೆ ಭಾರತದ ಸಿಮ್ ತಂದುಕೊಟ್ಟವರಿಗೆ ವೀಸಾ ಕ್ಲಿಯರ್ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.