ಮಂಗಳೂರು: ಯಕ್ಷಗಾನದ ಹಿರಿಯ ಕಲಾವಿದ ನವರಸ ನಾಯಕ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿಯವರ ಸಂಸ್ಮರಣಾರ್ಥ ಪಂಚಮ ತ್ರೈವಾರ್ಷಿಕ ಪುಳಿಂಚ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 24 ಶನಿವಾರದಂದು ಬಂಟ್ವಾಳ ತಾಲೂಕು ಬಾಳ್ತಿಲದಲ್ಲಿ ಜರಗಲಿದೆ. ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿ ಹೋದ ಖ್ಯಾತ ಹಾಸ್ಯಗಾರ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿದ್ದು ಅದನ್ನು ದಿವಂಗತರ ಪತ್ನಿಗೆ ನೀಡಲಾಗುವುದು. ಪ್ರಶಸ್ತಿಯು ತಲಾ ರೂ.25,000/- ನಿಧಿಯನ್ನು ಒಳಗೊಂಡಿದೆ ಎಂದು ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಶೆಟ್ಟಿ ಪುಳಿಂಚ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇದೇ ಸಮಾರಂಭದಲ್ಲಿ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಅವರು ಬರೆದ ‘ಮಹಿಮೆಯ ಮಹಾಮಾತೆ ಚೆಂಡೆ ಶ್ರೀ ಕಲ್ಲುರ್ಟಿ’ ಶ್ರೀ ಕ್ಷೇತ್ರ ಚೆಂಡೆ ಕಲ್ಲುರ್ಟಿ ದೈವಸ್ಥಾನದ ಕ್ಷೇತ್ರ ಪರಿಚಯ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗುವುದು. ಅಲ್ಲದೆ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಶಿರಾಜ್ ರಾವ್ ಕಾವೂರು ರಚಿಸಿದ ಕ್ಷೇತ್ರದ ತುಳು ಕನ್ನಡ ಭಕ್ತಿ ಗೀತೆಗಳ ಧ್ವನಿ ಮುದ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು.
ಪುತ್ತೂರು ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹೊಸದಿಗಂತ ಕನ್ನಡ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್. ಕೃತಿ ಬಿಡುಗಡೆ ಮಾಡುವರು. ದೈವಜ್ಞರಾದಂತಹ ಶಶಿಕುಮಾರ್ ಪಂಡಿತರವರು ಶ್ರೀ ಚೆಂಡೆ ಕಲ್ಲುರ್ಟಿ ಕ್ಷೇತ್ರದ ಕುರಿತಾದ ತುಳು-ಕನ್ನಡ ಭಕ್ತಿ ಗೀತೆಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸುವರು. ಬಂಟ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಹಾಗೂ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮುಖ್ಯ ಅತಿಥಿಗಳಾಗಿರುವರು.
ಇದೇ ಸಂದರ್ಭದಲ್ಲಿ ಪುಳಿಂಚ ಚಿಟ್ಸ್(ಒಪಿಸಿ) ಪ್ರೈ ಲಿಮಿಟೆಡ್ ಸಂಸ್ಥೆಯ ದಶಮಾನೋತ್ಸವವೂ ನಡೆಯಲಿದ್ದು ವಿವಿಧ ರಂಗದ ಸಾಧಕರನ್ನು ಗೌರವ ನಿಧಿಯೊಂದಿಗೆ ಸನ್ಮಾನಿಸಲಾಗುವುದು ಸಂಸ್ಥೆಯ ಪ್ರಗತಿಗೆ ಕಾರಣರಾದ ಸಿಬ್ಬಂದಿಗಳನ್ನು ಗೌರವಿಸಲಾಗುವುದು ಎಂದರು.
ಮೇ 23ರ ಶುಕ್ರವಾರ ಸಂಜೆ 6 ಗಂಟೆಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರಿ ಯಕ್ಷಗಾನದ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮ’ ಯಕ್ಷಗಾನ ಬಯಲಾಟ ಜರಗಲಿರುವುದು ಮತ್ತು 24ರಂದು ನವೀಕೃತ ದೈವಸ್ಥಾನದಲ್ಲಿ ರಾತ್ರಿ ದೊಂದಿ ಬೆಳಕಿನಲ್ಲಿ ಶ್ರೀ ಚೆಂಡೆ ಕಲ್ಲುರ್ಟಿ ದೈವದ ಡ್ರೈವಾರ್ಷಿಕ ಕೋಲ ಹಾಗೂ ನಾಲ್ಕು ಹರಕೆಯ ಕೋಲಗಳು ನಡೆಯುವುದು. ಅದೇ ದಿನ ಪೂರ್ವಾಹ್ನ ‘ಪುಳಿಂಚ ಸದನ’ ನೂತನ ಗೃಹ ಪ್ರವೇಶದ ಸಲುವಾಗಿ ಭಜನೆ ಕಾರ್ಯಕ್ರಮವಿರುವುದು. ಅಲ್ಲದೆ ಜೂನ್ 1 ರವಿವಾರ ಮಧ್ಯಾಹ್ನ 1 ಗಂಟೆಗೆ ವಾರ್ಷಿಕ ಅಗೆಲು ಸೇವೆ ಹಾಗೂ ಇದೇ ಸಂದರ್ಭದಲ್ಲಿ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಹಾಗೂ ಕಾವ್ಯಶ್ರೀ ಅಜೇರು ಇವರಿಂದ ಗಾನ ವೈಭವವಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇ 24ರಂದು ಅಪರಾಹ್ನ ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಮತ್ತು ಭಾಗವತ ಗಿರೀಶ್ ರೈ ಕಕ್ಕೆಪದವು ಅವರ ನೇತೃತ್ವದಲ್ಲಿ ಪ್ರಸಿದ್ಧ ಹಾಸ್ಯಗಾರರಿಂದ ‘ಕುರುಬನ ರಾಣಿ’ ಹಾಸ್ಯ ಪ್ರಸಂಗದ ಬಯಲಾಟ ಬಳಿಕ ಪ್ರಶಂಶ ಕಾಪು ತಂಡದಿಂದ ‘ಬಲೆ ತೆಲಿಪಾಲೆ’ ಕಾಮಿಡಿ ಶೋ ಏರ್ಪಡಿಸಲಾಗಿದೆ. ಚಾಪರ್ಕ ಕಲಾವಿದೆರ್ ಕುಡ್ಲ ಇವರ ಸಮಾಗಮದಲ್ಲಿ ‘ಪುದರ್ ದೀತಿಜಿ’ ಹಾಸ್ಯ ಪ್ರಧಾನ ನಾಟಕ ಪ್ರದರ್ಶನವಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಕೋಶಾಧಿಕಾರಿ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಮತ್ತು ಪುಳಿಂಚ ಚಿಟ್ಸ್ ಆಡಳಿತ ನಿರ್ದೇಶಕಿ ಪ್ರತಿಭಾ ಎಸ್. ಶೆಟ್ಟಿ ಪುಳಿಂಚ, ಸಲಹೆಗಾರ ಪ್ರೊಫೆಸರ್ ಭಾಸ್ಕರ್ ರೈ ಕುಕ್ಕುವಳ್ಳಿ, ಜನಾರ್ಧನ ಅಮ್ಮುಂಜೆ, ಸತೀಶ್ ಪೂಜಾರಿ ಚೆಂಡೆ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ: