ಲಕ್ನೋ: ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಎರಡು ರೈಲುಗಳ ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಆದರೆ ಲೋಕೋ ಪೈಲಟ್‌ಗಳ ಎಚ್ಚರಿಕೆಯಿಂದಾ ಭಾರೀ ದುರಂತ ತಪ್ಪಿದೆ. ರೈಲ್ವೆ ಹಳಿಗಳ ನಮೇಲೆ ಮರದ ದಿಮ್ಮಿಗಳನ್ನು ಕಟ್ಟಲಾಗಿತ್ತು. ಇದನ್ನು ದೂರದಿಂದಲೇ ಗಮನಿಸಿದ ಲೋಕೋಪೈಲಟ್‌ಗಳು ತುರ್ತು ಬ್ರೇಕ್ ಹಾಕಿ ರೈಲುಗಳನ್ನು ನಿಲ್ಲಿಸಿದ್ದಾರೆ.
ಸೋಮವಾರ ಸಂಜೆ, ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವಿನ ಹಳಿಗಳಲ್ಲಿ ದುಷ್ಕರ್ಮಿಗಳು ಮರದ ದಿಮ್ಮಿಗಳನ್ನು, ವೈರ್ ಬಳಸಿ ಹಳಿಗೆ ಕಟ್ಟಿದರು. ದೆಹಲಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಲೊಕೊ ಪೈಲಟ್ ಇದನ್ನು ಗಮನಿಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದರು. ರೈಲಿನಿಂದ ಇಳಿದು ಅದನ್ನು ತೆರವುಗೊಳಿಸಿ ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಕಠ್ಗೋಡಮ್ ಎಕ್ಸ್‌ಪ್ರೆಸ್ ರೈಲಿನ ಹಳಿತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಇದನ್ನು ಲೋಕೋ ಪೈಲಟ್ ಗಮನಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.
ಸೂಪರಿಂಟೆಂಡೆಂಟ್ ನೀರಜ್ ಕುಮಾರ್ ಜದೌನ್ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡಗಳು ತನಿಖೆ ನಡೆಸುತ್ತಿದೆ.