ಕಾಪು: ಇಬ್ಬರು ಮಹಿಳೆಯರಿಂದ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಅಪಹರಣ ಯತ್ನ, ತಡೆಯಲು ಬಂದ ತಾಯಿಗೆ ಚೂರಿಯಿಂದ ಇರಿದು ಎಸ್ಕೇಪ್!

ಉಡುಪಿ: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದ್ದು ತಡೆಯಲು ಬಂದ ಮಗುವಿನ ತಾಯಿಗೆ ಚೂರಿಯಿಂದ ಇರಿದು ಸಾರ್ವಜನಿಕರು ಒಟ್ಟು ಸೇರುತ್ತಲೇ ಸಿಕ್ಕಿ ಬೀಳುವ ಭಯದಲ್ಲಿ ರೈಲ್ವೇ ಹಳಿಯ ಬಳಿ ಬುರ್ಖಾ ಎಸೆದು ಪರಾರಿಯಾಗಿದ್ದಾರೆ. ಪೊಲೀಸರು ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದು ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಬೆಳಪು ಜನತಾಕಾಲನಿಯ ಮೊಹಮ್ಮದ್ ಆಲಿ ಎಂಬುವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ಶೌಚಾಲಯಕ್ಕೆ ಹೋಗಬೇಕು ಎಂದು ಕೇಳಿಕೊಂಡಿದ್ದರು. ಈ ವೇಳೆ ಒಬ್ಬ ಮಹಿಳೆ ಮನೆಯ ಒಳಗೆ ಪ್ರವೇಶಿಸಿ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೊರಗಡೆ ಓಡಿಹೋಗಲು ಪ್ರಯತ್ನಿಸಿದಾಗ, ಮಗುವಿನ ತಾಯಿ ತಾಬುರಿಸ್ ತಡೆದಿದ್ದಾರೆ. ಆಕೆ ಬೊಬ್ಬೆ ಹೊಡೆದಾಗ ಮಗುವನ್ನು ನೆಲದಲ್ಲಿ ಬಿಟ್ಟು ತಡೆಯಲು ಬಂದ ತಾಯಿಗೆ ಚೂರಿಯಿಂದ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಮಹಿಳೆಯರು ಬೆಳಪು ಆಸುಪಾಸಿನಲ್ಲಿ ಇರುವ ಸಂಶಯವಿದ್ದು, ಯಾರಿಗಾದರೂ ಮಹಿಳೆಯರು ಕಂಡು ಬಂದಲ್ಲಿ ತಕ್ಷಣ ಶಿರ್ವ ಠಾಣೆಗೆ 9480805450ಗೆ ತಿಳಿಸಲು ಕೋರಲಾಗಿದೆ. ಘಟನೆಯಿಂದ ಕಾಪು, ಬೆಳಪು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

error: Content is protected !!