ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಮೇ 18 ರವರೆಗೆ ವಿಸ್ತರಿಸಲಾಗಿರುವ ಕುರಿತಂತೆ ಮಾಹಿತಿಗಳು ಹೊರಬಂದಿದ್ದು, ಹಾಗಾದರೆ ಮೇ 19ರ ಬಳಿಕ ಏನಾಗುತ್ಎಂತದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಇದರ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದುವರೆಗೆ ನೀವು ನೋಡಿದ್ದು, ಬರೀ ಟ್ರೈಲರ್ ಅಷ್ಟ್ಟೇ ಎಂದು ಹೇಳಿರುವುದು ಕೂಡಾ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಒಂದು ಮಾಹಿತಿಯ ಪ್ರಕಾರ ನವದೆಹಲಿ ಮತ್ತು ಇಸ್ಲಾಮಾಬಾದ್‌ನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ನಿರ್ಧರಿಸಿದಂತೆ ಎಲ್ಲಾ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ಮೇಲೆ ವಿರಾಮವನ್ನು ಮೇ 18ರವರೆಗೆ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಮತ್ತು ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಗುರುವಾರ ಕದನ ವಿರಾಮದ ಬಗ್ಗೆ ಚರ್ಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದ್ದು, ಇದನ್ನು ಮೇ 18 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಹಾಗಾದರೆ ಮೇ 19ರ ಬಳಿಕ ಏನಾಗುತ್ತದೆ, ಭಾರತ ಮತ್ತೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆಯಾ? POK ಮತ್ತೆ ಭಾರತಕ್ಕೆ ಸೇರಿಸಲಾಗುತ್ತಾ? ಬಲೂಚಿಸ್ತಾನ ಸ್ವತಂತ್ರ ರಾಷ್ಟ್ರ ಘೋಷಣೆಯಾಗುತ್ತಾ ಎಂಬೆಲ್ಲಾ ಚರ್ಚೆಗಳು ಆರಂಭಗೊಂಡಿದೆ.
ಇದರ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುಜರಾತ್‌ನ ಭುಜ್‌ನಲ್ಲಿರುವ ವಾಯುಪಡೆಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಯೋಧರೊಂದಿಗೆ ಕೆಲ ಕಾಲ ಸಂವಹನ ನಡೆಸಿದರು. ಈ ವೇಳೆ ದೇಶವನ್ನು ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇಷ್ಟರವರೆಗೆ ಏನು ನಡೆಯಿತೋ ಅದು ಕೇವಲ ಟ್ರೈಲರ್ ಅಷ್ಟೇ, ಸರಿಯಾದ ಸಮಯ ಬಂದಾಗ ನಾವು ಸಂಪೂರ್ಣ ಚಿತ್ರವನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿರುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.