ಮಂಗಳೂರು: ಪಾಕಿಸ್ತಾನ ಜೊತೆಗಿನ ಕದನ ವಿರಾಮದ ಬಗ್ಗೆ ದೇಶಕ್ಕೆ ಸ್ಪಷ್ಟ ವಿಚಾರವನ್ನು ಮೋದಿ ಹೇಳಬೇಕು. ಪಾಕಿಸ್ತಾನದವರು ನಮ್ಮ 5 ಜೆಟ್ಗಳನ್ನ ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡೋದಕ್ಕೆ ಮೋದಿ ಯಾಕೆ ತಯಾರಿಲ್ಲ? ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಮೋದಿ ಪಹಲ್ಗಾಂನಲ್ಲಿ ನರಮೇಧ ಮಾಡಿದವರನ್ನ ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದ್ರು. ಹಾಗಾಗಿ ನಾವೆಲ್ಲಾ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಆದರೆ ಇವರು ಸುಳ್ಳನ್ನೇ ಹೇಳಿಕೊಂಡು ಬಂದರು ಎಂದು ದಿನೇಶ್ ಆರೋಪಿಸಿದರು. ಪಾಕಿಸ್ತಾನ ವಿಷಯದಲ್ಲಿ ಮೋದಿ ಸರ್ವ ಪಕ್ಷದ ಸಭೆ ಕರೆದು ಜನರ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೋದಿ ಹೇಳಿದ್ದೆಲ್ಲ ವೇದ ವಾಕ್ಯ ಎಂದು ನಾವು ನಂಬಬೇಕಾ? ಇಡಿ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕತೆ ಹೇಳೋದ್ರಲ್ಲಿ ಮೋದಿ ನಿಸ್ಸೀಮ. ದೇಶದ ಜನರು ಪಾಕ್ ವಿಷಯದಲ್ಲಿ ಸ್ಪಷ್ಟ ಉತ್ತರ ಬಯಸುತ್ತಿದ್ದಾರೆ ಎಂದರು.
ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದು ಸತ್ಯ, ಆನಂತರವೇ ಕದನ ವಿರಾಮ ಘೋಷಣೆ ಆದದ್ದೂ ಸತ್ಯ. ಟ್ರಂಪ್ ಹೇಳಿದ್ದು ಹಾಗಾದ್ರೆ ಸುಳ್ಳಾ? ಈ ಬಗ್ಗೆ ಪ್ರಧಾನಿ ಏನು ಹೇಳುತ್ತಾರೋ ಅದನ್ನು ನಾವು ಬಯಸುತ್ತಿದ್ದೇವೆ. ಟ್ರಂಪ್ ಅಂತ ಹೆಸರು ಹೇಳುವುದಕ್ಕೆ ಮೋದಿ ಭಯ ಪಡುತ್ತಾರೆ. 56 ಇಂಚು ಎದೆ ಇರುವ ಮೋದಿ ಟರ್ಕಿ, ಅಜರ್ ಬೈಜಾನ್ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ಚೀನಾ ವೆಪನ್ ಪಾಕಿಸ್ತಾನ ಯೂಸ್ ಮಾಡುತ್ತೆ, ಚೈನಾ ಬಗ್ಗೆ ಮಾತಾಡಲ್ಲ. ಅಜರ್ ಬೈಜಾನ್ ಹಾಗೂ ಟರ್ಕಿ ಜೊತೆ ವ್ಯಾಪಾರ ನಿಲ್ಲಿಸುತ್ತಾರೆನ್ನುವ ಮೋದಿ, ಚೀನಾ, ಅಮೆರಿಕ ಬಗ್ಗೆ ಮಾತಾಡಲ್ಲ ಎಂದು ಟೀಕಿಸಿದರು.
ಇತ್ತೀಚೆಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು, ಬೂಟಾಟಿಕೆಗೆ ನಾಲ್ಕು ವಿಮಾನಗಳನ್ನು ಮೇಲೆ ಕಳಿಸಿದ್ದು ಬಿಟ್ಟರೆ ಇವರು ಏನೂ ಮಾಡಿಲ್ಲ. ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಮಾಂಗಲ್ಯ ಕಳೆದುಕೊಂಡ 26 ಮಂದಿಯ ಅರಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳ ನೋವಿಗೆ ಸಿಕ್ಕ ಪರಿಹಾರ ಇದೇನಾ? ಎಂದು ಪ್ರಶ್ನಿಸಿದ್ದರು. ಇದನ್ನು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಕದನ ವಿರಾಮ ವಿಚಾರವನ್ನು ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು ಸತ್ಯ, ಘೋಷಣೆಯಾದ ನಂತರ ಕದನ ವಿರಾಮ ಘೋಷಣೆ ಆದದ್ದು ಸತ್ಯ. ಹಾಗಾದರೆ ಟ್ರಂಪ್ ಹೇಳಿದ್ದು ಸುಳ್ಳಾ? ಕದನ ವಿರಾಮವಾಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ. ಕಾಂಗ್ರೆಸ್ ನವರು ಸೈನ್ಯವನ್ನು ಟೀಕೆ ಮಾಡುತ್ತಿಲ್ಲ, ಶಾಸಕರೆನೋ ಹೇಳುತ್ತಾರೆ ಆದರೆ ಇವತ್ತು ಇಡೀ ದೇಶವೇ ಪ್ರಶ್ನೆ ಮಾಡುತ್ತಿದೆ ಎಂದು ಮಂಜುನಾಥ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಗಾದಿಗೆ ಮಾಜಿ ರೌಡಿ ಶೀಟರ್ ಆಯ್ಕೆ ವಿಚಾರವಾಗಿ ಮಾತನಾಡಿದ ಸಚಿವರು, ಸುಹಾಸ್ ಶೆಟ್ಟಿ ರೌಡಿ ಶೀಟರ್ ವಿಚಾರ ಬೇರೆ, ಈ ವಿಚಾರ ಬೇರೆ. ಎಲ್ಲ ರೌಡಿಶೀಟರ್ ಗಳೂ ಏನೂ ಆಗಬಾರದು ಎಂದು ಹೇಳಲು ಆಗುತ್ತಾ? ರೌಡಿಶೀಟರ್ ಎಂದೇ ಹೇಳಿಕೊಂಡು ಹೋಗುವುದು ಬೇಡ. ಆ ವಿಚಾರದಲ್ಲಿ ನನಗೂ ಆಕ್ಷೇಪಗಳಿವೆ ಎಂದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಬಿಜೆಪಿ ಆಗ್ರಹಿಸುತ್ತಿರುವ ಕುರಿತು ಮಾತಾಡಿದ ಅವರು, ನನಗೆ ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ ಎಂದರು.