ಘಟ್ಟದಲ್ಲಿ ಬಸ್ ಇಳಿದವ ನಿಗೂಢ ನಾಪತ್ತೆ: ಕತ್ತಲಲ್ಲಿ ಮಾಯವಾದ ವ್ಯಕ್ತಿ!

ಉಪ್ಪಿನಂಗಡಿ: ಬಸ್‌ನಿಂದ ಇಳಿದ ವ್ಯಕ್ತಿ ನಿಗೂಢವಾಗಿ ನಾಪತ್ತೆಯಾದ ಘಟನೆ ಶಿರಾಡಿ ಘಾಟ್ ಪ್ರದೇಶದಲ್ಲಿ ಮೊನ್ನೆ ತಡರಾತ್ರಿ ಸಂಭವಿಸಿದ್ದು, ಆತನ ಸುಳಿವು ಇದುವರೆಗೆ ಲಭ್ಯವಾಗಿಲ್ಲ. ಮಧ್ಯಪ್ರದೇಶ ಮೂಲದ ಶ್ರೀಪಾಲ್ ನರ್ರೆ (37) ನಾಪತ್ತೆಯಾದ ವ್ಯಕ್ತಿ. ಈತ ಬಸ್‌ನಿಂದ ಇಳಿದು ಒಂದೇ ಸಮನೆ ಓಡಿ ಹೋಗಿ ಕಣ್ಮರೆಯಾದನೆಂದು ಬಸ್‌ನಲ್ಲಿದ್ದ ಚಾಲಕ ಹೇಳಿದ್ದಾನೆ.


ಘಟನೆಯ ವಿವರ: ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶದ ಕಾರ್ಮಿಕರ ತಂಡವೊಂದು ಪ್ರಯಾಣಿಸುತ್ತಿತ್ತು. ಪುತ್ತೂರಿನ ಸಂಸ್ಥೆಯೊಂದರಲ್ಲಿ ದುಡಿಯಲು ಆಗಮಿಸುತ್ತಿದ್ದ ಈ ತಂಡದಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದ ಶ್ರೀಪಾಲ್ ನರ್ರೆ ಎಂಬಾತ ಶಿರಾಡಿ ಘಾಟ್ ಪ್ರವೇಶಿಸುತ್ತಿದ್ದಂತೆಯೇ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸುತ್ತಿದ್ದ. ಮೂತ್ರ ವಿಸರ್ಜನೆಯ ಕಾರಣಕ್ಕೆ ಈತ ವಿನಂತಿಸುತ್ತಿದ್ದಾನೆಂದು ಭಾವಿಸಿದ ಬಸ್ಸಿನ ನಿರ್ವಾಹಕ ಬಸ್ಸನ್ನು ನಿಲ್ಲಿಸುತ್ತಿದ್ದಂತೆಯೇ ಬಸ್ಸಿನಿಂದ ಇಳಿದವನೇ ಹೆದ್ದಾರಿಯಲ್ಲಿ ಹಿಂದಕ್ಕೆ ಓಡಿ ಕಣ್ಮರೆಯಾಗಿದ್ದಾನೆ. ಒಂದಷ್ಟು ಹೊತ್ತು ಈತನಿಗಾಗಿ ಕಾದ ಬಸ್‌ ಚಾಲಕ ಆತ ಹಿಂದಿರುಗದೇ ಇದ್ದ ಕಾರಣಕ್ಕೆ ಬಸ್ಸನ್ನು ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಸ್ಸಿನ ನಿರ್ವಾಹಕ ಮಾಹಿತಿ ನೀಡಿದ್ದಾರೆ.
ನಾಪತ್ತೆಯಾದ ಶ್ರೀಪಾಲ್ ನರ್ರೆಯ ವಿಚಿತ್ರ ವರ್ತನೆ ಅಚ್ಚರಿಗೆ ಕಾರಣವಾಗಿದೆ. ಈತ ಬಸ್‌ನಿಂದ ಇಳಿದಿದ್ದು ಯಾಕೆ, ಎಲ್ಲಿಗೆ ಓಡಿ ಹೋಗಿದ್ದಾನೆ, ಎಲ್ಲಿದ್ದಾನೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

error: Content is protected !!