ಅಕ್ಕನಿಂದ ಗಂಭೀರ ಆರೋಪ!
ಮಂಗಳೂರು: “ನನ್ನ ತಂಗಿ ಸುಮತಿ ನಾಯ್ಕ್ ಎಂಬಾಕೆ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಆಕೆಯ ಮೇಲೆ ಕಾರ್ಕಳ, ಬೆಳ್ತಂಗಡಿ, ತಮಿಳುನಾಡು ಮತ್ತಿತರ ಕಡೆ ಪ್ರಕರಣಗಳು ಇವೆ. ತಮಿಳುನಾಡಿನಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾಳೆ. ನನ್ನ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಲು ಅಮ್ಮನ ಪೋರ್ಜರಿ ಸಹಿ ಹಾಕಿಸಿದ್ದು ಈಗ ನನ್ನ ಗಂಡ ಮತ್ತು ಮಗನನ್ನು ನನ್ನಿಂದ ದೂರಮಾಡಿ ತನ್ನ ಜೊತೆಗೆ ಇರಿಸಿಕೊಂಡಿದ್ದಾಳೆ. ನಾನು ನನ್ನ ಗಂಡನ ಮೇಲೆ ದೂರು ನೀಡಲು ಮೂಡಬಿದ್ರೆ ಪೊಲೀಸ್ ಠಾಣೆಗೆ ಹೋದ ಸಂದರ್ಭದಲ್ಲಿ ನನಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಲ್ಲದೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಈಗ ಮೂಡಬಿದ್ರೆ ಪೊಲೀಸರು ಹಲ್ಲೆ ಮಾಡಿದ್ದರೆಂದು ಕಥೆ ಕಟ್ಟಿದ್ದಾಳೆ. ನನಗೆ ನಿರಂತರ ಜೀವ ಬೆದರಿಕೆ ಒಡುತ್ತಿದ್ದು ಆಕೆಯಿಂದ ರಕ್ಷಣೆ ಬೇಕು“ ಎಂದು ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಪತ್ರಿಕಾಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
”ನಾನು ಬೆಳುವಾಯಿಯಲ್ಲಿ ನನ್ನ ಮಗ ಹಾಗೂ ಗಂಡನ ಜೊತೆ ವಾಸಿಸುತ್ತಿದ್ದೇವೆ. ಸರಿಸುಮಾರು ಒಂದುವರೆ ತಿಂಗಳ ಹಿಂದೆ ನನ್ನ ಗಂಡ ಹಾಗೂ ಮಗ ನನ್ನ ತಂಗಿಯಾದ ಸುಮತಿ ಮನೆಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ವಾಪಾಸ್ ಬಾರದೆ ಇದ್ದುದರಿಂದ ನಾನು ಕಳವಳಗೊಂಡು ಮೂಡಬಿದ್ರೆ ಠಾಣೆಗೆ ದೂರು ಕೊಡಲು ಹೋದೆ. ದೂರು ಸ್ವೀಕರಿಸಿದ ಪೊಲೀಸರು ನನ್ನ ಗಂಡನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಮೇಲೆ ನಿಮ್ಮ ಹೆಂಡತಿ ದೂರು ನೀಡಿರುತ್ತಾರೆ. ಕೂಡಲೇ ಠಾಣೆಗೆ ಬನ್ನಿ ಎಂದು ಕರೆದರು. ಅದನ್ನು ತಿಳಿದ ನನ್ನ ಗಂಡ ನನ್ನ ತಂಗಿ ಸುಮತಿಗೆ ವಿಷಯ ತಿಳಿಸಿ ಅವಳ ಜೊತೆಗೆ ಠಾಣೆಗೆ ಬಂದರು. ಅವಳು ಪೊಲೀಸರ ಜೊತೆಗೆ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಳು. ಅದನ್ನು ಕೇಳಿ ಪೊಲೀಸ್ ಸಿಬ್ಬಂದಿ ಇದು ಸ್ಟೇಶನ್ ಇಲ್ಲಿ ತುಂಬಾ ಜನ ಇದ್ದಾರೆ. ನಿಧಾನವಾಗಿ ಮಾತಾಡು ಎಂದಾಗ ಅವರಿಗೂ ಅವಾಚ್ಯ ಪದಗಳಿಂದ ಬೈದು ನನಗೆ ಚಪ್ಪಲಿನಿಂದ ಹೊಡೆಯುತ್ತಾಳೆ. ಅದನ್ನು ತಡೆಯಲು ಬಂದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾಳೆ. ಆಮೇಲೆ ಅದನ್ನು ತಡೆಯಲು ಬಂದ ಸಾರ್ವಜನಿಕರ ಮೇಲೆ ಚಪ್ಪಲಿನಿಂದ ಹಲ್ಲೆ ನಡೆಸಿರುತ್ತಾಳೆ. ಇದು ನಾನು ಮತ್ತು ಇತರ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿದ್ದು ಆ ಬಳಿಕ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಲಗಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ಕಟ್ಟುಕಥೆ ಕಟ್ಟಿದ್ದಾಳೆ ಎಂದು ಆರೋಪಿಸಿದರು.
ನನ್ನ ತಂಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು ಊರಿನಲ್ಲಿ 4-5 ದಿನ ಉಳಿದು ಬೆಂಗಳೂರು ಇತ್ಯಾದಿ ಬೇರೆ ಬೇರೆ ಕಡೆಗಳಲ್ಲಿ ಇರುತ್ತಾಳೆ. ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅವಳ ಹೆಸರಿಗೆ ಅಕ್ರಮವಾಗಿ ಮಾಡಿಕೊಂಡಿರುತ್ತಾಳೆ. ನಾನು ದೂರನ್ನು ಕೊಡಲು ಬಂದಿರುವುದರಿಂದ ಮೊಬೈಲ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ನಿನ್ನ ಉಸಿರನ್ನು ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾಳೆ. ಈ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಿದ್ದೇನೆ. ನನಗೆ ಸೂಕ್ತ ರಕ್ಷಣೆಯನ್ನು ಪೊಲೀಸ್ ಇಲಾಖೆ ನೀಡಬೇಕು“ ಎಂದು ಪ್ರಫುಲ್ಲ ನಾಯ್ಕ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆ ನಾಯಕರು ಉಪಸ್ಥಿತರಿದ್ದರು.