ಮಂಗಳೂರು: “ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಆರೋಪಿಗಳನ್ನು ಸ್ಪೀಕರ್, ಗೃಹಸಚಿವರು, ಮುಖ್ಯಮಂತ್ರಿ ಎಲ್ಲರೂ ನಾಮುಂದು ತಾಮುಂದು ಎಂಬಂತೆ ರಕ್ಷಣೆ ಮಾಡಲು ಇಳಿದಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಎನ್ ಐಗೆ ವಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಸಾರಿ ಹೇಳುತ್ತಿದ್ದಾರೆ. ರಾಷ್ಟ್ರೀಯತೆ ಪರವಾಗಿರುವವರ ವಿರುದ್ಧ ಸಿದ್ದರಾಮಯ್ಯ ದ್ವೇಷ ಭಾವನೆ ಹೊಂದಿದ್ದಾರೆ. ಸಿದ್ದರಾಮಯ್ಯ ಅವರು ವಿಸಿಟಿಂಗ್ ಸಿಎಂ ಆಗಿದ್ದಾರೆ. ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಸುಹಾಸ್ ಶೆಟ್ಟಿ ಹತ್ಯೆ ಜನರನ್ನು ಭಯಭೀತಗೊಳಿಸಿದೆ ಆದರೆ ಸಿದ್ದರಾಮಯ್ಯ ಅವರು ಮೃತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡುವುದಿಲ್ಲ ಯಾಕೆ?” ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಪತ್ರಿಕಾಗೋಷ್ಟಿಯಲ್ಲಿ ಬ್ರಿಜೇಶ್ ಚೌಟ ಪ್ರಶ್ನಿಸಿದರು.
“ಕಾಂಗ್ರೆಸ್ ಗೆ ಭಯವಿದೆ. ಇಲ್ಲಿನ ಜನರಿಗೆ ಕಾಂಗ್ರೆಸ್ ಹಣೆಬರಹ ಗೊತ್ತಿದೆ. ಇದನ್ನು ತಡೆಯಲು ಕರಾವಳಿಯ ಜನರ ಮೇಲೆ ಹಗೆ ಸಾಧಿಸುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ ಪ್ರತೀ ಬಾರಿ ಹೇಳುವ ಮುಖ್ಯಮಂತ್ರಿಯವರು ನುಡಿದಂತೆ ನಡೆಯುತ್ತಿದ್ದಾರೆಯೇ? ಎನ್ ಐಎ ತನಿಖಾ ಸಂಸ್ಥೆ ಇರುವುದು ರಾಜ್ಯ ಸರಕಾರಕ್ಕೆ ತನಿಖೆಯಲ್ಲಿ ಸಹಾಯ ಮಾಡಲು.ಹೀಗಿರುವಾಗ ಯಾಕೆ ಎನ್ ಐಗೆ ವಹಿಸುತ್ತಿಲ್ಲ?” ಎಂದವರು ಪ್ರಶ್ನಿಸಿದರು.
“ನಾಳೆ ಮತ್ತೆ ಮುಖ್ಯಮಂತ್ರಿಯವರು ಜಿಲ್ಲೆಗೆ ಬಂದು ಹೋಗುತ್ತಾರೆ. ಆದರೆ ಜಿಲ್ಲೆಯ ಶಾಸಕರು ಸಂಸದರನ್ನು ಭೇಟಿ ಮಾಡುತ್ತಿಲ್ಲ ಯಾಕೆ? ಜಿಲ್ಲೆಯ ಎಲ್ಲಾ ಅಕ್ರಮ ದಂಧೆಗಳ ಹಿಂದೆ ಇವರಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವ, ರಾಜಗೋಪಾಲ ರೈ, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.