ʼಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಿʼ : ದ.ಕ. ಡಿಸಿ ಮುಲ್ಲೈ ಮುಗಿಲನ್

ಮಂಗಳೂರು : 2025ರ ಸಾಲಿನ ಎಸ್ಎಸ್ಎಲ್ ಸಿ , ಪಿಯುಸಿ ಸಾಧಕರನ್ನು ಅಭಿನಂದಿಸುತ್ತಾ ʼಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಿʼ ಎಂದು ಮುಲ್ಲೈ ಮುಗಿಲನ್ ಕರೆ ನೀಡಿದ್ದಾರೆ.ಅವರು ಬುಧವಾರ ಡಿ.ಸಿ.ಬಂಗಲೆಯಲ್ಲಿ ಹಮ್ಮಿಕೊಂಡಿದ್ದ 2025ರ ಎಸ್‌ಎಸ್‌ಎಲ್‌ಸಿ , ಪಿಯುಸಿ ಸಾಧಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.ಸಮಾಜದಲ್ಲಿ ಭವಿಷ್ಯದಲ್ಲಿ ನಮ್ಮಿಂದ ಎಷ್ಟು ಜನರಿಗೆ ಉಪಕಾರ ಆಗುತ್ತದೆ ಎನ್ನುವುದರ ಮೇಲೆ ನಮ್ಮ ಯಶಸ್ಸು ಅಡಗಿದೆ. ನಮ್ಮ ಮೇಲೆ ಮೊದಲು ನಮಗೆ ನಂಬಿಕೆ ಬೇಕು.ಪೊಷಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ನೀಡಬೇಕು. ಮಕ್ಕಳ ಸಾಧನೆಯಲ್ಲಿ ಪೋಷಕರ,ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ವಿದ್ಯಾರ್ಥಿ ಗಳು ಕಲಿಕೆಯ ಉದ್ದೇಶ ಮತ್ತು ಪ್ರಾಮುಖ್ಯತೆ ತಿಳಿದುಕೊಳ್ಳುವುದು ಹಾಗೇ ಆಸಕ್ತಿ ಹೊಂದಿರುವುದು ಅತ್ಯಂತ ಅವಶ್ಯಕ. ನನ್ನ ಬಾಲ್ಯದಲ್ಲಿ ಡಿ.ಸಿ ಬಂಗಲೆ ಬಳಿ ಹೋಗುತ್ತಿದ್ದೆ, ಅಲ್ಲಿ ಇದ್ದ ಡಿ.ಸಿ ಹೆಸರು ಗಮನಿಸಿ ಆ ಜಾಗದಲ್ಲಿ ನನ್ನ ಹೆಸರು ಒಂದು ದಿನ ಕಾಣಬೇಕು ಎಂದು ಯೋಚಿಸುತ್ತಿದ್ದೆ. ಅದೇ ಚಿಂತನೆ ನಾನು ಜಿಲ್ಲಾಧಿಕಾರಿಯಾಗಲು ಒಂದು ಕಾರಣ ಎಂದು ಹೇಳಿದರು. ಅದೇ ಕಾರಣಕ್ಕಾಗಿ ಡಿಸಿ ಬಂಗಲೆಯಲ್ಲಿ ಸಾಧಕರನ್ನು ಕರೆದು ಸನ್ಮಾನಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾತನಾಡಿ, ನೀವು ಪರಿಶ್ರಮದಿಂದ ಉತ್ತಮ ಸ್ಥಾನ ಪಡೆದಿದ್ದೀರಿ ಅದನ್ನು ಕಾಯ್ದು ಕೊಳ್ಳುವುದು ಮುಖ್ಯ. ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಕೊಂಡು ಮುಂದಿನ ಅಧ್ಯಯನ ವೃತ್ತಿಯನ್ನು ಆಯ್ಕೆ ಮಾಡಿ ಕೊಳ್ಳಬೇಕು ಎಂದು ಕಿವಿ ಮಾತು ಹೇಳಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ ಮಾತನಾಡಿ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಮತ್ತು ಪಿಯುಸಿಯಲ್ಲಿ ಎರಡನೆ ಸ್ಥಾನ ಪಡೆಯಲು ಕಾರಣರಾದ ವಿದ್ಯಾರ್ಥಿ ಸಾಧಕರು, ಪೋಷಕರಿಗೆ ಹಾಗು ಸಾಧಕರನ್ನು ಪ್ರೋತ್ಸಾಹಿಸುತ್ತಿರುವ ನಾಗರೀಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಾಧಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ ಗೋಯಲ್, ಡಿಎಫ್‌ಒ ಆ್ಯಂಟೊನಿ ಮರಿಯಪ್ಪ ಮೊದಲಾದವರು ಶುಭ ಹಾರೈಸಿದರು. ಮಂಜುನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!