ದಾವಣಗೆರೆ: ನಗರದ ಹದಡಿ ರಸ್ತೆಯ ಕ್ಲಬ್‌ನಲ್ಲಿ ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ಮತ್ತೆ ಹತ್ತು ಮಂದಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯ 20ಕ್ಕೆ ಏರಿದೆ.
ರೌಡಿಶೀಟರ್ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನ ಮೇಲೆ ಅಟಕಾಯಿಸಿದ ಹಂತಕರು ಆತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಲ್ಲದೆ, ಶವದ ಬಳಿಯಲ್ಲೇ ʻಉಘೇ ಉಘೇʼ ರಣಕೇಕೆ ಹಾಕಿ ಅಬ್ಬರಿಸಿದ್ದರು. ಇದರ ವಿಡಿಯೋಗಳು ವೈರಲಾಗಿದ್ದವು.
ದಾವಣಗೆರೆಯ ಆರ್ ಎಂ ಸಿ ರಸ್ತೆಯ ಭಾರತ್ ಕಾಲೋನಿ ನಿವಾಸಿಯಾದ ಟೈಲ್ಸ್ ಕೆಲಸ ಮಾಡುತ್ತಿದ್ದ ಸಂತೋಷ (28), ಭಾರತ್ ಕಾಲೋನಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ತಿಕ್ (29), ದಾವಣಗೆರೆ ನಗರದ ಬಾಬು ಜಗಜೀವನ್ ರಾಮ್ ನಗರದ ಬೂದಾಳ್ ರಸ್ತೆಯ ವಾಸಿಯಾದ ಹಮಾಲಿ ಕೆಲಸ ಮಾಡುತ್ತಿದ್ದ ಪ್ರಭು (30), ನವೀನ್ ಅಲಿಯಾಸ್ ಬಾಕ್ರಿ (25). ರಾಜ ಅಲಿಯಾಸ್ ತಾರಕ್ (25), ಹರಳಯ್ಯನಗರದ ಹಳೇಚಿಕ್ಕನಹಳ್ಳಿ ವಾಸಿಯೂ ಆದ ಪೇಟಿಂಗ್ ಕೆಲಸ ಮಾಡುತ್ತಿದ್ದ ನವೀನ್ @ ಸೈಲೆಂಟ್ ನವೀನ್ (20), ಭಾರತ್ ಕಾಲೋನಿ ನಿವಾಸಿ ಮಾರುತಿ (25), ಭಾರತ್ ಕಾಲೋನಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ಬಸವರಾಜ್ ಅಲಿಯಾಸ್ ಪಿಂಕಿ (20), ಆವರಗೆರೆಯ ಪ್ರಥಮ ವರ್ಷದ ಬಿ. ಕಾಂ. ವಿದ್ಯಾರ್ಥಿ ಜಯಸೂರ್ಯ ಅಲಿಯಾಸ್ ಪಿ. ಟಿ. (20), ಆಟೋ ಡ್ರೈವರ್ ಭರತ್ ಅಲಿಯಾಸ್ ಸ್ಲಮ್ (26) ಬಂಧಿತ ಆರೋಪಿಗಳು
ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಮಾಡಿದ್ದ ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದರು. ಇವರನ್ನು ಹೊಳಲ್ಕೆರೆ ಪೊಲೀಸರು ದಾವಣಗೆರೆ ಪೊಲೀಸರಿಗೆ ಹಸ್ತಾಂತರಿಸಿದ್ದರು.
ವಿದ್ಯಾನಗರ ಪೊಲೀಸ್ ಠಾಣೆಗೆ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಪತ್ನಿ ನೀಡಿದ್ದ ದೂರಿನಲ್ಲಿ 12 ಮತ್ತು ಇತರೆ ಆರೋಪಿಗಳ ವಿರುದ್ಧ ಕೊಲೆ ಮಾಡಿದ ಆರೋಪ ಮಾಡಲಾಗಿತ್ತು. ಗುಂಡಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ಖಾರದ ಪುಡಿ ಮಂಜನ ತಮ್ಮ ನವೀನ್, ಚಾವಳಿ ಸಂತು, ಬಸವರಾಜ್ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರು ಸೇರಿ ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಕೊಲೆಗೆ ಕಾರಣವೇನೆಂಬುವುದನ್ನು ಪೊಲೀಸರು ಆರೋಪಿಗಳ ಬಾಯಿ ಬಿಡಿಸುತ್ತಿದ್ದಾರೆ.