ನವದೆಹಲಿ: ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಮೋದಿ ಇಲ್ಲಿಗೆ ಭೇಟಿ ನೀಡಿರುವುದರ ಉದ್ದೇಶ ಬಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ ವಾಯುಪಡೆಯ ಸಿಬ್ಬಂದಿ, ಯೋಧರೊಂದಿಗೆ ಸಂವಾದ ನಡೆಸಿದರು. ವಿಶೇಷವೆಂದರೆ ಭಾರತ-ಪಾಕ್ ಉದ್ವಿಗ್ನತೆಯ ಸಂದರ್ಭ ಪಾಕಿಸ್ತಾನವು ಜೆಎಫ್ -17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್ಸಾನಿಕ್ ಕ್ಷಿಪಣಿಗಳು ಉದಂಪುರ ವಾಯುನೆಲೆಯನ್ನು ಸರ್ವನಾಶ ಮಾಡಿತ್ತು ಎಂದು ಪಾಕಿಸ್ತಾನ ಸುಳ್ಳು ಹಬ್ಬಿಸಿದ್ದಲ್ಲದೆ, ಭಾರತದ S-400 ವಾಯುರಕ್ಷಣಾ ವ್ಯವಸ್ಥೆಯನ್ನು ಸರ್ವನಾಶ ಮಾಡಲಾಗಿದೆ ಎಂದು ಹೇಳಿಕೊಂಡಿತ್ತು.
ಅಸಲಿಗೆ ಪಾಕಿಸ್ತಾನ ಅದಂಪುರ ವಾಯುನೆಲೆಯನ್ನು ನಾಶಪಡಿಸಲು ಯತ್ನಿಸಿದ್ದು ನಿಜ. ಅಲ್ಲದೆ ಉಧಂಪುರ, ಪಠಾಣ್‌ಕೋಟ್, ಅದಂಪುರ ಮತ್ತು ಭುಜ್ ವಾಯುನೆಲೆಗಳಲ್ಲಿ ಪಾಕಿಸ್ತಾನ ದಾಳಿಗೆ ಯತ್ನಿಸಿತ್ತು. ಭಾರತೀಯ ವಾಯುಪಡೆಯ (ಐಎಎಫ್) ನಾಲ್ಕು ಪ್ರಮುಖ ಕೇಂದ್ರಗಳಲ್ಲಿ ಅದಂಪುರ ವಾಯುನೆಲೆ ಪ್ರಮುಖವಾಗಿದೆ. ಪಾಕ್ ದಾಳಿಯಿಂದ ಅದಂಪುರ ವಾಯುನೆಲೆ ಕೊಂಚ ಹಾನಿಯಾಗಿದ್ದೂ ನಿಜ. ಆದರೆ ಇದರಿಂದ ವಾಯುನೆಲೆಯ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಿರಲಿಲ್ಲ. ಪಾಕಿಸ್ತಾನದ ಡ್ರೋನ್, ವಿಮಾನಗಳನ್ನು, ಕ್ಷಿಪಣಿಗಳನ್ನು ಇಲ್ಲಿಂದಲೇ ನಾಶಮಾಡಲಾಗಿತ್ತು.
ನರೇಂದ್ರ ಮೋದಿ ಇಂದು ಅದಂಪುರಕ್ಕೆ ಭೇಟಿ ನೀಡುವ ಮೂಲಕ ಪಾಕಿಸ್ತಾನದ ಸುಳ್ಳುಗಳನ್ನು ಜಗತ್ತಿನ ಮುಂದೆ ಬಯಲುಮಾಡಿದ್ದಾರೆ. ಮೋದಿ ಇಂದು ನಡೆಸಿದ ಸಂವಾದದ ಚಿತ್ರದಲ್ಲಿ ವಾಯುನೆಲೆ ಸುಸ್ಥಿತಿಯಲ್ಲಿದೆ ಎನ್ನುವುದು ಜಗತ್ತಿಗೆ ಜಹಜ್ಜಾಗೀರಾಗಿದೆ. ಪ್ರಧಾನಿ ಮೋದಿ ಸೈನಿಕರತ್ತ ಕೈ ಬೀಸುತ್ತಿರುವಾಗ ಮಿಗ್ -29 ಜೆಟ್ ಮತ್ತು ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಈ ಮೂಲಕ ಮೋದಿ ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನವನ್ನು ಒಂದೇ ಏಟಿಗೆ ನೆಲಸಮ ಮಾಡಿದ್ದಾರೆ.
ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ವಾಯುಪಡೆ ಸಿಬ್ಬಂದಿ ಜೊತೆ ಪ್ರಧಾನಿ ಮೋ ಸುಮಾರು 1 ಗಂಟೆ ಕಾಲ ಕಳೆದರು.
ಆದಂಪುರದ ವಿಶೇಷತೆ
-ಆದಂಪುರ ವಾಯುನೆಲೆಯು ಭಾರತದ ಅತಿದೊಡ್ಡ ವಾಯನೆಲೆಯಾಗಿದ್ದು, ಮಿಗ್ 29 ಯುದ್ಧ ವಿಮಾನಗಳು ಇಲ್ಲಿದೆ.
-ಐತಿಹಾಸಿಕವಾಗಿ, ಪಾಕಿಸ್ತಾನದೊಂದಿಗಿನ ಹಿಂದಿನ ಘರ್ಷಣೆಗಳಲ್ಲಿ, ಮುಖ್ಯವಾಗಿ 1965 ರ ಯುದ್ಧದ ಸಮಯದಲ್ಲಿ ಆದಂಪುರ ವಾಯುನೆಲೆ ಪ್ರಮುಖ ಪಾತ್ರ ವಹಿಸಿದೆ.
-ಗಡಿಯಿಂದ ಕೇವಲ 100 ಕಿ.ಮೀ ದೂರದಲ್ಲಿರುವ ಇದರ ಕಾರ್ಯತಂತ್ರದ ಭೌಗೋಳಿಕ ಸ್ಥಳವು ಭಾರತದ ಉತ್ತರ ವಾಯು ರಕ್ಷಣೆಗೆ ಪ್ರಮುಖವಾಗಿದೆ.
-1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಆದಂಪುರವು ಪ್ರಮುಖ ಗುರಿಯಾಗಿತ್ತು, ಆದರೆ ಪಾಕಿಸ್ತಾನ ಭೇದಿಸಲು ಸಾಧ್ಯವಾಗದ ಏಕೈಕ ವಾಯುನೆಲೆಯಾಗಿತ್ತು. ವಾಯುನೆಲೆಯು Su-7 ಮತ್ತು Mig-21 ನಂತಹ ಪ್ರಮುಖ ವಿಮಾನಗಳನ್ನು ಹೊಂದಿತ್ತು. ಇದು ಒಂದು ಪ್ರಮುಖ ಕ್ಷಿಪಣಿ ಮತ್ತು ರಾಡಾರ್ ಘಟಕವನ್ನು ಸಹ ಹೊಂದಿತ್ತು.
-ಮೊದಲ S-400 ವಾಯು ರಕ್ಷಣಾ ಘಟಕವನ್ನು 2022 ರಲ್ಲಿ ಆದಂಪುರ ವಾಯುನೆಲೆಯಲ್ಲಿ ನಿಯೋಜಿಸಲಾಯಿತು. ಪ್ರಸ್ತುತ, ಇದು MiG-29ಗಳು ಮತ್ತು Su-30 MKIಗಳು ಸೇರಿದಂತೆ IAFನ ಕೆಲವು ಪ್ರಮುಖ ಫೈಟರ್ ಸ್ಕ್ವಾಡ್ರನ್‌ಗಳಿಗೆ ನೆಲೆಯಾಗಿದೆ.
-ಅತ್ಯಾಧುನಿಕ ಕಣ್ಗಾವಲು ಮತ್ತು ರಾಡಾರ್ ವ್ಯವಸ್ಥೆಗಳನ್ನು ಹೊಂದಿರುವ ಆದಂಪುರ ವಾಯುನೆಲೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಂತಹ ರಾಜ್ಯಗಳನ್ನು ಸುರಕ್ಷಿತಗೊಳಿಸುವ ಮತ್ತು ರಕ್ಷಿಸುವಲ್ಲಿ ನಿರ್ಣಾಯಕವಾಗಿದೆ.