ಸುಳ್ಳು-ವಂಚನೆಗಳ ಕದನ ವಿರಾಮ: ಪಾಕ್‌ ವಿರುದ್ಧ ಯುದ್ಧ ಮುಂದುವರಿಕೆಗೆ ಭಾರತದ ನೆರವು ಕೇಳಿದ ಬಲೂಚ್

ಕ್ವೆಟ್ಟಾ: ಭಾರತ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಪುಟ್ಟ ಲಿಬರೇಷನ್‌ ಆರ್ಮಿ ಮಾತ್ರ ಪಾಕಿಸ್ತಾನದ ವಿರುದ್ಧ ಯುದ್ಧ ಮುಂದುವರಿಸುವ ವಾಗ್ದಾನ ಮಾಡಿದೆ. ಅಲ್ಲದೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ಲಿಬರೇಶನ್ ಆರ್ಮಿ ಭಾರತದ ಸಹಾಯವನ್ನು ಕೋರಿದೆ. ಪಾಕಿಸ್ತಾನದ ಶಾಂತಿ ಮತ್ತು ಕದನ ವಿರಾಮದ ಹೇಳಿಕೆಗಳನ್ನು ಬಿಎಲ್‌ಎ “ಸುಳ್ಳು ಪ್ರಚಾರ ಮತ್ತು ವಂಚನೆ” ಎಂದು ಬಣ್ಣಿಸಿದೆ.


ಪಾಕಿಸ್ತಾನ ಸೇನೆಯ ವಿರುದ್ಧ ಯುದ್ಧ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು ಪಾಕಿಸ್ತಾನದ ಮೇಲೆ ಮತ್ತೆ ದಾಳಿ ನಡೆಸುವಂತೆ ಭಾರತಕ್ಕೆ ಪತ್ರ ಬರೆದಿದೆ. ಅದರಲ್ಲಿ, “ಪಾಕಿಸ್ತಾನವನ್ನು ಪಶ್ಚಿಮದಿಂದ ನಾಶಪಡಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ತಾವು ಯಾವುದೇ ದೇಶದ ಕೈಗೊಂಬೆಯಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಲ್‌ಎ, ಪ್ರಾದೇಶಿಕ ರಾಜಕೀಯ ಮತ್ತು ಮಿಲಿಟರಿ ಸಮೀಕರಣದಲ್ಲಿ ನಿರ್ಣಾಯಕ ಪಕ್ಷವಾಗಿದೆ ಎಂದು ಒತ್ತಿ ಹೇಳಿದೆ.

ಪಾಕಿಸ್ತಾನದ ಶಾಂತಿ ಮತ್ತು ಕದನ ವಿರಾಮದ ಹೇಳಿಕೆಗಳನ್ನು ಬಿಎಲ್‌ಎ “ಸುಳ್ಳು ಪ್ರಚಾರ ಮತ್ತು ವಂಚನೆ” ಎಂದು ಬಣ್ಣಿಸಿರುವ ಅದು, ಇವು ಕೇವಲ ಪಾಕಿಸ್ತಾನದ ಕಾರ್ಯತಂತ್ರದ ನಡೆಗಳು ಎಂದು ಆರೋಪಿಸಿದೆ. ಜೊತೆಗೆ, “ಪಾಕಿಸ್ತಾನದ ಮಾತುಗಳಿಗೆ ಬಲಿಯಾಗಬೇಡಿ, ನಿರ್ಣಾಯಕ ಕ್ರಮ ಕೈಗೊಳ್ಳಿ” ಎಂದು ಭಾರತ ಮತ್ತು ಇತರ ಪ್ರಾದೇಶಿಕ ಶಕ್ತಿಗಳಿಗೆ ಮನವಿ ಮಾಡಿದೆ. ಪಾಕಿಸ್ತಾನವನ್ನು “ಭಯೋತ್ಪಾದಕ ಕಾರ್ಖಾನೆ” ಎಂದು ಕರೆದಿರುವ ಬಿಎಲ್‌ಎ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜಾಗತಿಕ ಭಯೋತ್ಪಾದನೆಯ ಕೇಂದ್ರವಾಗಿದೆ ಎಂದು ದೂಷಿಸಿದೆ.

ಬಿಎಲ್‌ಎ ತನ್ನ ಹೋರಾಟದಲ್ಲಿ ಗಣನೀಯ ಯಶಸ್ಸು ಸಾಧಿಸಿರುವುದಾಗಿ ಹೇಳಿಕೊಂಡಿದೆ. “ಯಾವುದೇ ಬಾಹ್ಯ ಬೆಂಬಲವಿಲ್ಲದೆ, ಬಲೂಚಿಸ್ತಾನದ ನೆಲದಲ್ಲಿ ಪಾಕಿಸ್ತಾನದಂತಹ ಪರಮಾಣು ಶಕ್ತಿಯನ್ನು ಹಲವು ರಂಗಗಳಲ್ಲಿ ಸೋಲಿಸಿದ್ದೇವೆ,” ಎಂದು ಘೋಷಿಸಿರುವ ಬಿಎಲ್‌ಎ, ಪಾಕಿಸ್ತಾನವನ್ನು “ಬೇರುಗಳಿಂದ ನಿರ್ಮೂಲನೆ” ಮಾಡಲು ಭಾರತ ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ನೀಡಬೇಕು ಎಂದು ಕೋರಿದೆ. ಜೊತೆಗೆ, “ಪಾಕಿಸ್ತಾನ ಇರುವವರೆಗೆ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಅಸ್ಥಿರತೆ ಮುಂದುವರಿಯುತ್ತದೆ,” ಎಂದು ಎಚ್ಚರಿಕೆ ನೀಡಿದೆ.

ಪಾಕ್‌ ಮೇಲೆ ನಿರಂತರ ದಾಳಿ:

ಬಲೂಚಿಗಳು ಪಾಕಿಸ್ತಾನದ ಕುತ್ತಿಗೆ ಹಿಸುಕಲು ಸಿದ್ಧತೆ ನಡೆಸುತ್ತಿದ್ದಾರೆ. ಪಾಕಿಸ್ತಾನಿ ಸೇನೆಯ ಮೇಲೆ ನಡೆದ 51 ಕ್ಕೂ ಹೆಚ್ಚು ದಾಳಿಗಳ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೊತ್ತುಕೊಂಡಿದೆ. ಆಕ್ರಮಿತ ಬಲೂಚಿಸ್ತಾನದ 51 ಕ್ಕೂ ಹೆಚ್ಚು ಸ್ಥಳಗಳಲ್ಲಿ 71 ದಾಳಿಗಳನ್ನು ನಡೆಸಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ.

error: Content is protected !!