ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಮಾದೇರಿಯ ಗಂಗಪ್ಪ ಗೌಡರ ಮಗ ಶರತ್ ಕುಮಾರ್ (34) ಎಂಬವರನ್ನು ಶುಕ್ರವಾರ ರಾತ್ರಿ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹರಿಪ್ರಸಾದ್ ಬಂಧಿತ ಆರೋಪಿ. ಈತ ಮೃತ ಯುವಕನ ಚಿಕ್ಕಪ್ಪ ದಿ.ಜನಾರ್ದನ ಗೌಡರ ಮಗ ಎಂದು ತಿಳಿದುಬಂದಿದೆ.
ಶರತ್ ಕುಮಾರ್ ತಂದೆ, ತಾಯಿ ಹಾಗೂ ಸಹೋದರ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿದ್ದು ಮಾದೇರಿ ಯಲ್ಲಿ ಶರತ್ ಕುಮಾರ್ ಒಬ್ಬರೇ ವಾಸ್ತವ್ಯವಿದ್ದರು. ಶರತ್ ಕುಮಾರ್ ಹಾಗೂ ಅವರ ಚಿಕ್ಕಪ್ಪ ದಿ.ಜನಾರ್ದನ ಗೌಡರವರ ಮನೆ ಅಕ್ಕಪಕ್ಕದಲ್ಲೇ ಇದ್ದು, ಶರತ್ ಕುಮಾರ್ ಹಾಗೂ ದಿ.ಜನಾರ್ದನ ಗೌಡರ ಮಕ್ಕಳ ಮಧ್ಯೆ ಕೆಲವು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಗಲಾಟೆಯಾಗುತ್ತಿತ್ತು. ಮೇ 8ರಂದು ಶರತ್ ಕುಮಾರ್ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಗೌಡರವರ ಮನೆಯವರು ಅವರ ಮನೆಗೆ ಕೊಂಡು ಹೋಗುತ್ತಿದ್ದಾಗ ಕಟ್ಟಿಗೆಯನ್ನು ಕೊಂಡು ಹೋಗದಂತೆ ಶರತ್‌ಕುಮಾರ್ ತಿಳಿಸಿದ್ದು ಈ ವೇಳೆ ಜನಾರ್ದನ ಗೌಡರವರ ಮನೆಯವರಿಗೂ ಶರತ್‌ಕುಮಾರ್ ನಡುವೆ ಗಲಾಟೆ ನಡೆದಿದೆ.
ಅದು ಮತ್ತೆ ಮುಂದುವರಿದು ಮೇ 9ರಂದು ರಾತ್ರಿ ಶರತ್ ಕುಮಾರ್ ಮಾದೇರಿಯಲ್ಲಿರುವ ಚಿಕ್ಕಪ್ಪನ ಮನೆಗೆ ತೆರಳಿದ್ದು, ಅವರ ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮಗ ಸತೀಶನಿಗೆ ಬೈಯುತ್ತಿದ್ದ. ಈ ಸಂದರ್ಭ ತೋಟಕ್ಕೆ ಹೋಗಿದ್ದ ಹರಿಪ್ರಸಾದ್ ಎಂಬಾತನು ಬಂದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ಕುಮಾರ್‍ನ ತಲೆಗೆ ಹಲ್ಲೆ ನಡೆಸಿದ್ದ. ಈ ವೇಳೆ ಶರತ್ ಕುಮಾರ್ ಅಂಗಳದಲ್ಲಿ ಕುಸಿದು ಬಿದ್ದಾಗ ಹರಿಪ್ರಸಾದ್ ಮತ್ತೆ ಶರತ್ ಕುಮಾರ್‍ನ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಈ ಬಗ್ಗೆ ಮೃತನ ಸಹೋದರ ಚರಣ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸರಿಗೆ ತನಿಖೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಮೇ 10ರ ಬೆಳಗ್ಗಿನ ತನಕವೂ ಶರತ್ ಕುಮಾರ್ ಮೃತದೇಹ ಆರೋಪಿ ಹರಿಪ್ರಸಾದ್‌ರವರ ಮನೆಯ ಮೆಟ್ಟಿಲಿನ ಬಳಿಯಲ್ಲಿಯೇ ಬಿದ್ದಿತ್ತು. ಮೃತದೇಹದ ಪಕ್ಕ ಚಾಕುವೊಂದು ಕಾಣಿಸಿಕೊಂಡಿತ್ತು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸ್ಥಳಕ್ಕೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಕೊಲೆ ಪ್ರಕರಣದ ಆರೋಪಿ ಹರಿಪ್ರಸಾದ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.