ಕುಡುಪು ಗುಂಪು ಹತ್ಯೆ ಪ್ರಕರಣ: ಪ್ರಕರಣವನ್ನು ಫಾಸ್ಟ್‌ ಟ್ರಾಕ್‌ ನ್ಯಾಯಾಲಯಕ್ಕೆ ಒಪ್ಪಿಸಲು ಅಶ್ರಫ್‌ ಸಹೋದರನಿಂದ ಮನವಿ

ಮಂಗಳೂರು : ಇತ್ತೀಚೆಗೆ ಕುಡುಪುವಿನಲ್ಲಿ ಕ್ರಿಕೆಟ್‌ ಟೂರ್ನಮೆಂಟ್‌ ವೇಳೆ ಗುಂಪುಹತ್ಯೆಗೀಡಾಗಿದ್ದಾನೆ ಎನ್ನಲಾದ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ಅಶ್ರಫ್‌ ಪ್ರಕರಣವನ್ನು ಫಾಸ್ಟ್‌ ಟ್ರಾಕ್‌ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಸಹೋದರ ಜಬ್ಬಾರ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಗೆ ಮನವಿ ಸಲ್ಲಿಸಿದ್ದಾರೆ.

ʼಎಪ್ರಿಲ್‌ 27ರಂದು ಹತ್ಯೆಗೀಡಾದ ನನ್ನ ಸಹೋದರ ಅಶ್ರಫ್‌ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ತನಿಖಾ ಪ್ರಕ್ರಿಯೆಯಲ್ಲಿ ಹಲವಾರು ಲೋಪಗಳು ಕಂಡು ಬಂದಿದೆ. ಅದರ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿ ಸೇರಿ ಇಬ್ಬರು ಪೊಲೀಸರನ್ನು ಈಗಾಗಲೇ ಇಲಾಖೆ ಅಮನಾತುಗೊಳಿಸಿದೆಯಾದರೂ, ಬದಲಿ ತನಿಖಾಧಿಕಾರಿಯನ್ನು ನೇಮಿಸಿಲ್ಲ. ಹಾಗಾಗಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒಬ್ಬರು ದಕ್ಷ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣ ನೇಮಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕುʼ ಎಂದು ಜಬ್ಬಾರ್‌ ಮನವಿಯಲ್ಲಿ ಆಗ್ರಹಿಸಿದ್ದಾರೆ.

ʻತೆಹಸೀನ್ ಪೂನಾವಾಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಗುಂಪು ಹತ್ಯೆ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸಬೇಕಾಗುತ್ತದೆ. ಅದೇ ಈ ಪ್ರಕರಣವನ್ನೂ ಫಾಸ್ಟ್ ಟ್ರ್ಯಾಕ್ ನ್ಯಾಯಲಯಕ್ಕೆ ಒಪ್ಪಿಸಬೇಕು. ಭಾರತೀಯ ನ್ಯಾಯ ಸಂಹಿತೆ- 2023 ಜಾರಿಯಾದ ಬಳಿಕ ಇದೇ ಮೊದಲು ಕರ್ನಾಟಕದಲ್ಲಿ ಗುಂಪು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹಾಗಾಗಿ ಈ ಪ್ರಕರಣಕ್ಕೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡಲೇ ನೇಮಿಸಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸಬಾರದು. ಈ ಮೂಲಕ ತೆಹಸೀನ್ ಪೂನಾವಾಲ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಪ್ರಕಾರ ಈ ಪ್ರಕರಣದಲ್ಲೂ ಜಾರಿಗೆ ತರಬೇಕುʼ ಎಂದು ಮನವಿಯಲ್ಲಿ ಒತ್ತಾಯಿಲಾಗಿದೆ.

ಮಾಜಿ ಮೇಯರ್‌ ಅಶ್ರಫ್‌, ಶಾಹುಲ್‌ ಹಮೀದ್‌, ನಾಸಿರ್ ಲಕ್ಕಿಸ್ಟಾರ್‌ ಉಪಸ್ಥಿತರಿದ್ದರು.

error: Content is protected !!