ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ’: ಮೇ 10ರಂದು ಗೋಲ್ಡ್ ಫಿಂಚ್ ಸಿಟಿಯಲ್ಲಿ 1.5 ಲಕ್ಷ ಮಹಿಳೆಯರ ಸಮಾವೇಶ: ರಾಜೇಂದ್ರ ಕುಮಾರ್

ಮಂಗಳೂರು: ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ’ ಇದೇ 10ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬಂಗ್ರಕೂಳೂರುನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುವ ಸಮಾವೇಶದಲ್ಲಿ 1.5 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರ ಧರಿಸಿ ಭಾಗವಹಿಸಲಿದ್ದಾರೆ. ಇಂತಹ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಇದುವರೆಗೆ ಎಲ್ಲೂ ನಡೆದಿಲ್ಲ ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.


ಅವರು ಬಂಗ್ರಕೂಳೂರಿನ ಗೋಲ್ಡ್‌ಪಿಂಚ್‌ ಸಿಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ 25 ವರ್ಷಗಳ ಹಿಂದೆ ಆರಂಭಗೊಂಡ ಸಂಘ ಇಂದು ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಬೆಳೆದಿದೆ. ನವೋದಯದಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಅಭಿವೃದ್ಧಿ ಕಂಡಿದ್ದಾರೆ ಎಂದರು.


ನವೋದಯ ಗುಂಪಿನ ಮಹಿಳೆ ಕಾಪು ಮಜೂರಿನ ನಂದಿನಿ ಸ್ವಸಹಾಯಸಂಘದ ಸದಸ್ಯೆ ಪ್ರಭಾವತಿ ಎಂಬವರನ್ನು ಪರಿಚಯಿಸಿ, ಅವರ ಯಶೋಗಾಥೆಯನ್ನು ವಿವರಿಸಿದ ರಾಜೇಂದ್ರ ಕುಮಾರ್‌, 25 ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗಂಡನನ್ನು ಕಳೆದುಕೊಂಡ ಇವರು ನವೋದಯ ಗುಂಪಿಗೆ ಸೇರಿ ಇಂದು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಇಂತಹಾ ಹಲವು ಮಹಿಳೆಯರು ನವೋದಯ ಸ್ವ ಸಹಾಯ ಗುಂಪಿನಲ್ಲಿದ್ದಾರೆ ಎಂದರು.

ಈ ಕಾರ್ಯಕ್ರಮವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಗೋಲ್ಡ್‌ಪಿಂಚ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದ್ದು, ನವೋದಯ ಗುಂಪಿಗೆ ಮಾತ್ರವಲ್ಲದೆ ನಮ್ಮ ಜಿಲ್ಲೆಗೂ ಹೆಸರು ತರಲಿದ್ದು, ಬೇರೆಯ ಜಿಲ್ಲೆಯವರಿಗೂ ಪ್ರೇರಣೆಯಾಗಲಿದೆ. ಮೊದಲು ರಾಜ್ಯ ಆಮೇಲೆ ದೇಶ ಎಂಬಂತೆ ಬೇರೆ ಕಡೆ ಕಾರ್ಯಕ್ರಮ ನಡೆಸಲೂ ನಾವು ಬದ್ಧರಾಗಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾದರೆ ದೇಶ ಬೆಳೆಯುತ್ತದೆ, ನಮ್ಮ ಮಕ್ಕಳೂ ದೊಡ್ಡ ಹುದ್ದೆಗೆ ಹೋಗಬೇಕು, ನವೋದಯ ಗುಂಪು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದ್ದು, ಅವರ ಕನಸು ನನಸಾಗಿದೆ ಎಂದರು.

ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಅಧ್ಯಕ್ಷ ಡಾ. ಎಂ.ಎನ್‌ ರಾಜೇಂದ್ರ ಕುಮಾರ್‌ ಅವರು, ಕುಟುಂಬಗಳಿಗೆ ಒಳ್ಳೆಯ ಹೆಸರು ಬರಬೇಕೆಂಬ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಗುಂಪು ಸ್ಥಾಪನೆ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ,‌  ಹಾಗೂ ಆಗಿನ ಸಹಕಾರ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಕಾರ್ಕಳದಲ್ಲಿ ಉದ್ಘಾಟಿಸಲ್ಪಟ್ಟ  ಸಂಘ ಇಂದು ಎಂಟು ಜಿಲ್ಲೆಗಳಲ್ಲಿ ಬೆಳೆಯಲು ನಮ್ಮ ಅಧ್ಯಕ್ಷರ ಹುರುಪು, ಪ್ರಾಮಾಣಿಕತೆಯೇ ಕಾರಣ. ಮದುವೆ, ಉದ್ದಿಮೆ ಹೀಗೆ ಹಲವು ಸಾಲ ಸೌಲಭ್ಯ ಪಡೆದು ಮಹಿಳೆಯರು ಲಾಭ ಪಡೆದಿದ್ದಾರೆ. ಇಲ್ಲಿ ಜಾಮೀನು, ಆಸ್ತಿ ಅಡಮಾನ ರಹಿತ ಸಾಲ ಸೌಲಭ್ಯವಿದ್ದು, ಮರುಪಾವತಿ ವ್ಯವಸ್ಥೆ ಇದೆ. ಇಲ್ಲಿ ವಸೂಲಾತಿ ಇರುವುದಿಲ್ಲ. ಈ ಗುಂಪುಗಳು ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ನೀಡಿದೆ. 25 ವರ್ಷಗಳ ರಜತ ಸಂಭ್ರಮ ನನ್ನ ಕುಟುಂಬದ ಜೊತೆ ಆಗಬೇಕು ಎನ್ನುವ ರಾಜೇಂದ್ರ ಕುಮಾರ್‌ ಕನಸಿನಂತೆ ಮೇ 10ರಂದು ಗೋಲ್ಡ್‌ಪಿಂಚ್‌ನಲ್ಲಿ ಸಮಾವೇಶ ನಡೆಯಲಿದೆ ಎಂದರು.

ಖ್ಯಾತ ತುಳು ಚಲನ ಚಿತ್ರ ನಿರ್ದೇಶಕ, ನಾಟಕ ರಚನೆಕಾರ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಅವರ ತುಳು ಹಾಸ್ಯಮಯ ಚಲನ ಚಿತ್ರ ʻಡಾಕ್ಟ್ರಾ? ಭಟ್ರಾʼ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ವಿಜಯ್‌ ಕುಮಾರ್‌ ಕೊಡಿಯಾಲ್, ಇದೊಂದು ಸಮಾಜಿಕ ಸಂದೇಶ ಸಾರುವ ಚಿತ್ರವಾಗಿದ್ದು, ಅನೇಕ ಗಣ್ಯ ಕಲಾವಿದರು ನಟಿಸಿದ್ದಾರೆ. ಕಾಮಿಡಿ ಚಲನ ಚಿತ್ರವಾಗಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್.ಎಸ್. ಕೋಟ್ಯಾನ್, ಶಶಿಕುಮಾರ್ ರೈ, ಎಂ.ವಾದಿರಾಜ ಶೆಟ್ಟಿ, ಎಸ್.ಬಿ.ರಾಜೇಶ್ ರಾವ್, ಕುಶಾಲಪ್ಪ ಗೌಡ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯದ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಸುನೀಲ್ ಕುಮಾರ್ ಬಜಗೋಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಉದ್ಯಮಿ ಪುಷ್ಪರಾಜ್ ಜೈನ್, ನವೋದಯ ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಯಾರೆಲ್ಲಾ ಭಾಗಿ?

-ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್, ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ್ ವಿ. ಜೋಶಿ ಮುಂತಾದವರು ಭಾಗಿ

-ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ

-ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗಿ

ಕಾರ್ಯಕ್ರಮದ ವಿಷೇತೆಗಳು:
-ಏಕಕಾಲಕ್ಕೆ ನಡೆಯುವ ಸಮಾವೇಶದಲ್ಲಿ ಸುಮಾರು ಒಂದೂವರೆ ಲಕ್ಷ ಮಹಿಳೆಯರು ಸಮವಸ್ತ್ರ ಧರಿಸಿ ಭಾಗವಹಿಸಲಿದ್ದಾರೆ.
-ಮಹಾರಾಷ್ಟದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಸಹಕಾರಿಗಳು, ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ.
-ಸಮಾವೇಶದಲ್ಲಿ ಅತ್ಯಾಧುನಿಕ ವ್ಯವಸ್ಥೆ ಇದ್ದು, ಕೂಲರ್‌ ವ್ಯವಸ್ಥೆ ಇರಲಿದೆ.
-ಬೈಂದೂರು, ಶಿರೂರುನಿಂದ ಬರುವವರಿಗೆ ಪಡುಬಿದ್ರೆ, ಮೂಡಬಿದ್ರೆ ಮಾರ್ಗವಾಗಿ ಬರುವವರಿಗೆ ವಾಮಂಜೂರಿನಲ್ಲಿ, ಬಂಟ್ವಾಳದಲ್ಲಿ ಬಂಟರ ಭವನ, ಫರಂಗಿಪೇಟೆಯ ಯಶಸ್ವಿ ಹಾಲ್‌ನಲ್ಲಿ ಒಟ್ಟಾಗಲು ವ್ಯವಸ್ಥೆ ಇದೆ.
– ಪ್ರತಿಯೊಬ್ಬರಿಗೂ ಊಟ, ಉಪಹಾರ, ನೀರು, ಬಿಸ್ಕೆಟ್ ವ್ಯವಸ್ಥೆ ಇದೆ
-3000 ಬಸ್‌, 7000 ಕಾರ್‌ಗಳನ್ನು ಬುಕ್ಕಿಂಗ್‌ ಮಾಡಲಾಗಿದೆ

error: Content is protected !!