ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರಿಸಿದ ಪಾಕ್ – ನಾಲ್ವರು ಮಕ್ಕಳು ಸೇರಿ 15 ನಾಗರಿಕರು ಸಾವು, 57 ಮಂದಿಗೆ ಗಾಯ

ಜಮ್ಮು/ಶ್ರೀನಗರ: ಭಾರತ ಆಪರೇಷನ್‌ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿದರೂ ತನ್ನ ಬುದ್ದಿ ಬಿಟ್ಟಿಲ್ಲ. ಇಂದು ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ನಾಲ್ಕು ವಲಯಗಳಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶೆಲ್‌ ದಾಳಿ ಮುಂದುವರಿಸಿದ್ದು, ಫಿರಂಗಿ ದಾಳಿ ಹಾಗೂ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಕ್ಕಳು ಮತ್ತು ಒಬ್ಬರು ಯೋಧರು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟು 57 ಜನರು ಗಾಯಗೊಂಡಿದ್ದಾರೆ.

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಭಾಗವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ, ಪಾಕ್‌ ಸೇನೆ ಜಮ್ಮು ಮತ್ತು ಕಾಶ್ಮೀರದ ಗ್ರಾಮಗಳನ್ನು ಗುರಿಯಾಗಿಸಿ ಫಿರಂಗಿ, ಶೆಲ್‌ ದಾಳಿ ನಡೆಸಿತ್ತು. ಬುಧವಾರಕ್ಕೆ ಹೋಲಿಸಿದರೆ, ಇಂದು ಗಡಿಯಾಚಿನ ಗುಂಡಿನ ದಾಳಿಯ ತೀವ್ರತೆ ಕಡಿಮೆಯಾಗಿದ್ದು, ನಾಲ್ಕು ವಲಯಗಳಲ್ಲಿ ಮಾತ್ರ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ʻಪಾಕಿಸ್ತಾನ ಸೇನೆಯು ಮೇ 7 ಮತ್ತು 8ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ ಮತ್ತು ಅಖ್ನೂರ್‌ ವಲಯಗಳಲ್ಲಿನ ಎಲ್‌ಒಸಿಯುದ್ದಕ್ಕೂ ಲಘು ಶಸ್ತ್ರಾಸ್ತ್ರಗಳು ಮತ್ತು ಫಿರಂಗಿಗಳನ್ನು ಬಳಸಿ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಸೇನೆ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದೆ’ ಎಂದು ಜಮ್ಮುವಿನಲ್ಲಿರುವ ರಕ್ಷಣಾ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

ಶೆಲ್ ದಾಳಿಯ ಸಮಯದಲ್ಲಿ ಭಾರತೀಯ ಸೇನಾ ಸೈನಿಕನೊಬ್ಬರು ಹುತಾತ್ಮರಾಗಿದ್ದಾರೆ. ಯೋಧರನ್ನು 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಬಾಲಕೋಟ್, ಮೆಂಧರ್, ಮಂಕೋಟ್, ಕೃಷ್ಣ ಘಾಟಿ, ಗುಲ್ಪುರ್, ಕೆರ್ನಿ ಮತ್ತು ಪೂಂಚ್ ಜಿಲ್ಲಾ ಕೇಂದ್ರಗಳು ಸೇರಿದಂತೆ ಪೂಂಚ್‌ನ ಎಲ್‌ಒಸಿ ಉದ್ದಕ್ಕೂ ಶೆಲ್ ದಾಳಿ ವರದಿಯಾಗಿದ್ದು, ಇದರ ಪರಿಣಾಮವಾಗಿ ಡಜನ್ ಗಟ್ಟಲೆ ಮನೆಗಳು ಮತ್ತು ವಾಹನಗಳು ಹಾನಿಗೊಳಗಾದವು.
ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಹತ್ತು ಜನರು ಗಾಯಗೊಂಡಿದ್ದಾರೆ ಮತ್ತು ರಾಜೌರಿ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಿಯಂತ್ರಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಯಲ್ಲಿ ಮೂವರು ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಗಾಯಗೊಂಡ ನಾಗರಿಕರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಬಲ್ವಿಂದರ್ ಕೌರ್ ಅಲಿಯಾಸ್ ರುಬಿ (33), ಮೊಹಮ್ಮದ್ ಜೈನ್ ಖಾನ್ (10), ಅವರ ಅಕ್ಕ ಜೋಯಾ ಖಾನ್ (12), ಮೊಹಮ್ಮದ್ ಅಕ್ರಮ್ (40), ಅಮ್ರಿಕ್ ಸಿಂಗ್ (55), ಮೊಹಮ್ಮದ್ ಇಕ್ಬಾಲ್ (45), ರಂಜೀತ್ ಸಿಂಗ್ (48), ಶಕೀಲಾ ಬಿ (40), ಅಮರ್‌ಜೀತ್ ಸಿಂಗ್ (47), ಮರಿಯಮ್ ಖಾಟೂನ್ (7), ವಿಹಾನ್ ಭಾರ್ಗವ್ (13) ಮತ್ತು ಮೊಹಮ್ಮದ್ ರಫಿ (40) ಮತ್ತು ಸೇನೆಯ ಲ್ಯಾನ್ಸ್ ನಾಯಕ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

error: Content is protected !!