ಕಾರ್ಕಳ : ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಆಗ್ರಹಿಸಿ ತುಳುನಾಡಿನ ಶಾಸಕರು ಮೇ 9 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ಬಹಳಷ್ಟು ಜನರ ಪಿತೂರಿ ಇದೆ ಎನ್ನುವಂತಹ ಬಲವಾದ ಅನುಮಾನವಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಕೈಜೋಡಿಸಿದ್ದಾರೆ ಎಂಬ ಆರೋಪಗಳು ರಾಜ್ಯಾದಾದ್ಯಂತ ಹರಿದಾಡುತ್ತಿದೆ. ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಹರಿದಾಡಿದೆ. ಜೊತೆಗೆ ಕೊಲೆಗೆ ಸಹಾಯ ಮಾಡಿದ ಆರೋಪ ಹೊತ್ತಿರುವ ಮಹಿಳೆಯರನ್ನು ಇನ್ನೂ ಬಂಧಿಸಲಾಗಿಲ್ಲ.
ರಾಷ್ಟ್ರೀಯ ತನಿಖಾ ಸಂಸ್ಥೆಯಂತಹ ಸಮಗ್ರ ತನಿಖೆಯಿಂದ ಮಾತ್ರ ಸಂಪೂರ್ಣ ಸತ್ಯ ಹೊರಬರಲು ಸಾಧ್ಯ. ಆದರೆ ಇಂತಹ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರದಿಂದ ಹೆಚ್ಚಿನ ಇಚ್ಛಾಶಕ್ತಿ ಇಲ್ಲ ಎಂದು ತೋರುತ್ತದೆ. ಆದ್ದರಿಂದ, ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ದ.ಕ ಹಾಗೂ ಉಡುಪಿ ಜಿಲ್ಲೆಗಳ ಶಾಸಕರು ಅವರನ್ನು ಒತ್ತಾಯಿಸಲಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.