ಮಂಗಳೂರು: ಜಿಲ್ಲೆಯಲ್ಲಿ ಆದಷ್ಟು ಬೇಗ ಆಂಟಿ ಕಮ್ಯೂನಲ್ ಟಾಸ್ಕ್ ಪೋರ್ಸ್(ಕೋಮುನಿಗ್ರಹ ಕಾರ್ಯದಳ) ರಚನೆಯಾಗಿ ಅದಕ್ಕೆ ʻನಾನು ಭಾರತೀಯʼ ಎಂಬ ಭಾವನೆಯುಳ್ಳ ದಕ್ಷ ಅಧಿಕಾರಿಯನ್ನು ನೇಮಿಸಬೇಕು ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ ಆಗ್ರಹಿಸಿದ್ದಾರೆ.
ಅವರು ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಮುಂದಿಟ್ಟು ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸಗಳನ್ನು ನಿಯಂತ್ರಣಕ್ಕೆ ತಂದು ಪ್ರೀತಿಯನ್ನು ಹಂಚುವ ಕೆಲಸವಾಗಬೇಕಿದೆ. ಈ ಮೂಲಕ ಜಿಲ್ಲೆ ಪ್ರಗತಿಯ ಪಥದತ್ತ ಸಾಗುವಂತಾಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಯಾವತ್ತು ಕೂಡಾ ದ್ವೇಷ ಹರಡುವ ಕೆಲಸ ಮಾಡಿಲ್ಲ, ಸಮಾಜದಲ್ಲಿ ತುಷ್ಟೀಕರಣ ಮಾಡುವುದಿಲ್ಲ. ನಮ್ಮ ರಾಜಕೀಯಕ್ಕೋಸ್ಕರ ಜಿಲ್ಲೆಯನ್ನು ಬಲಿ ಕೊಡುವುದು ಬೇಡ. ನಮ್ಮ ದೇಶದ ಸಂವಿಧಾನ ಅನುಗುಣವಾಗಿ, ನಾವೆಲ್ಲರೂ ಭಾರತೀಯರು ಎಂಬ ನೆಲೆಯಲ್ಲಿ ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸಿ, ಸಮಾಜಿಕ ನ್ಯಾಯ ಕೊಡುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಕಾನೂನು ಬಾಹಿರ ಕೃತ್ಯ ಮಾಡುವ ಯಾವುದೇ ವ್ಯಕ್ತಿಗಳಾಗಲೀ, ಸಂಘಟನೆಗಳಾಗಲೀ, ನಾವು ಸಪೋರ್ಟ್ ಮಾಡುವ ಕೆಲಸ ಮಾಡಿಲ್ಲ ಎಂದರು.
ಗೃಹಸಚಿವರು ಅಧಿಕಾರ ಸ್ವೀಕರಿಸಿದ ಮೊತ್ತ ಮೊದಲು ಕರಾವಳಿಯಲ್ಲಿ ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇದೀಗ ಅದನ್ನು ಮಾಡುವ ಅಗತ್ಯ ಬಂದಿದೆ. ಕೋಮು ನಿಗ್ರಹ ದಳದಲ್ಲಿ ʻನಾನು ಭಾರತೀಯʼ ಎಂಬ ಭಾವನೆಯುಳ್ಳ ಒಬ್ಬ ಒಳ್ಳೆಯ ಅಧಿಕಾರಿಯನ್ನು ನೇಮಿಸಬೇಕು. ಈ ಜಿಲ್ಲೆಯಲ್ಲಿ ಆಗುತ್ತಿರುವಂತಹ ಬೇರೆ ಬೇರೆ ವಿಚಾರಗಳಲ್ಲಿ ಕೋಮು ಭಾವನೆ ಕೆರಳಿಸುವಂತಹಾ ಘಟನೆಗಳನ್ನು ನಿಯಂತ್ರಿಸುವಂತಾಗಬೇಕು. ಈ ಪೋರ್ಸನ್ನು ಅದನ್ನು ಬೇಗ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು
ಕುಡುಪುವಿನಲ್ಲಿ ಗುಂಪು ಹತ್ಯೆಗೀಡಾದ ಆಶ್ರಫ್ ಕುಟುಂಬದವವರಿಗೂ ದೇವರು ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕೊಡಲಿ. ಅದೇ ರೀತಿ ಸುಹಾಸ್ ಶೆಟ್ಟಿ ಒಬ್ಬ ಕ್ರಿಮಿನಲ್ ಆಗಿರಬಹುದು. ಅವನ ಮೇಲೆ ಎರಡು ಹತ್ಯೆ ಕೇಸ್, ನಾಲ್ಕೈದು ಕೇಸ್‌ಗಳಿರಬಹುದು, ಆದರೆ ಅವನ ತಂದೆ ತಾಯಿಯ ಬಗ್ಗೆ ನಮಗೆ ಸಹಾನುಭೂತಿ ಇದೆ. ಅವರ ಕುಟುಂಬಿಕರಿಗೂ ದುಏವರು ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ ಪ್ರಾರ್ಥಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ಮುಖಂಡರಿದ್ದರು.