ಮಂಗಳೂರು: ಕಾಶ್ಮೀರದ ಪಹಲ್ಗಾಂನಲ್ಲಿ ನರಮೇಧ ನಡೆಸಿ ಹಲವಾರು ಹೆಣ್ಣು ಮಕ್ಕಳ ಸಿಂಧೂರ ಕಸಿದುಕೊಂಡ ಉಗ್ರರಿಗೆ ತಕ್ಕ ಪಾಠ ಕಲಿಸಲು ಪ್ರತಿಯಾಗಿ ಭಾರತ ಸರ್ಕಾರ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳ ಮೇಲೆ ʻಆಪರೇಷನ್ ಸಿಂಧೂರʼದ ಮೂಲಕ ಯಶಸ್ವಿಯಾಗಿ ದಾಳಿ ನಡೆಸಿ, ಉಗ್ರರ ಮೃತ ದೇಹವೂ ಗುರುತಿಸಲಾಗದಷ್ಟು ಭೀಕರ ಮರಣದಂಡನೆ ನೀಡಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ನಿನ್ನೆ ಭಾರತದ ವಾಯು ಸೇನೆ ಏರ್ ಸ್ಟ್ರೈಕ್ ನಡೆಸಿದ ಕುರಿತಂತೆ, ಪತ್ರಿಕಾ ಹೇಳಿಕೆ ನೀಡಿರುವ ಅವರು ಇದು ಉಗ್ರಗಾಮಿಗಳನ್ನು ಪೋಷಿಸುವ ರಾಷ್ಟ್ರಗಳಿಗೆ, ಭಾರತದ ಒಳಗಡೆಯೂ ಉಗ್ರಗಾಮಿಗಳಿಗೆ ಕುಮ್ಮಕ್ಕು, ಹಣ ಸಹಾಯ ನೀಡುವ ದೇಶದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರಕ್ಕೆ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಲು ತಿಳಿದಿದೆ, ಜಾಗತಿಕವಾಗಿ ಶಾಂತಿ, ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೂಡ ಬದ್ಧವಾಗಿದೆ ಎಂದು ತೋರಿಸಿಕೊಟ್ಟಿದೆ. ಭಾರತ ಇದೀಗ ಪಾಕಿಸ್ತಾನದ ಮೇಲೆ ನಡೆಸಿರುವ ದಾಳಿ ಸೀಮಿತವಾಗಿರುವುದಾದರೂ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಮತ್ತೆ ಮತ್ತೆ ತೋರಿಸಿದಲ್ಲಿ ಮುಂದಿನ ಬಾರಿಯ ಆಕ್ರಮಣ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವುದರೊಂದಿಗೆ ಪೂರ್ಣಗೊಳಿಸಬೇಕು ಡಾ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.