ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೀಟಿಂಗ್‌ಗಳ ಮೇಲೆ ಮೀಟಿಂಗ್ ನಡೆಸುತ್ತಲೇ ಇದ್ದು, ಪಾಕಿಸ್ತಾನದ ಮೇಲೆ ಸೇನಾ ದಾಳಿ ಖಚಿತ ಎಂದು ಹೇಳಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕ್ ವಿರುದ್ಧ ಪ್ರತೀಕಾರ ತೀರಿಸಲು ಮೋದಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದು, ಇಂದು ಕೂಡಾ ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ಅಜಿತ್ ದೋವಲ್ ಮೀಟಿಂಗ್ ನಡೆಸಿದ್ದು, ಇದರಲ್ಲಿ ಮೂರೂ ಸೇನೆಯ ದಂಡನಾಯಕರು ಭಾಗವಹಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ಅಜಿತ್ ದೋವಲ್ ಜತೆ ಚರ್ಚೆ ನಡೆಸಿದ್ದು, ಇದು ಕಳೆದ 24 ಗಂಟೆಯೊಳಗಿನ 2ನೇ ಭೇಟಿಯಾಗಿದೆ. ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹಾಗೂ ಸೇನಾ ದಂಡಾನಾಯಕರ ಜೊತೆ ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಪಹಲ್ಗಾಮ್ ಭಯೋ*ತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರನ್ನು ಹ*ತ್ಯೆಗೈದ ಘಟನೆ ನಂತರ ಭಾರತ ಪಾಕ್ ವಿರುದ್ಧ ಕಠಿನ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಭಯ ದೇಶಗಳ ನಡುವೆ ಯುದ್ಧ ಕಾರ್ಮೋಡ ಕವಿದಿದೆ. ಪಾಕಿಸ್ತಾನದ ಎಲ್ಲಾ ಆಮದಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ. ಭಾರತ ನಮ್ಮ ಮೇಲೆ ಸೇನಾ ದಾಳಿ ನಡೆಸಲಿದೆ ಎಂದು ಪಾಕ್ ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಮೇ 7ರಂದು ದೇಶಾದ್ಯಂತ 259 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಇದರೊಂದಿಗೆ ಪಾಕ್ ಜತೆಗಿನ ಯುದ್ಧ ಖಚಿತಗೊಂಡಂತಾಗಿದೆ ಎಂದು ವರದಿ ವಿವರಿಸಿದೆ.