ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಹಿಂದೂಗಳನ್ನು ಹಿಡಿದಿದ್ದಾರೆ. ಅಪರಾಧಿಗಳ ಜೊತೆ ಭರ್ಜರಿ ಡಿನ್ನರ್ ಪಾರ್ಟಿಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಬಂಧಿತ ಇಬ್ಬರು ಹಿಂದೂ ಹುಡುಗರು ಮುಸ್ತಫಾ ಕೈ ಕೆಳಗೆ ಕೆಲಸ ಮಾಡುವವರು. ಮೊಹಮ್ಮದ್ ಮುಸ್ತಫಾ ಆಯೋಜಿಸಿದ್ದ ಕ್ರಿಕೆಟ್‌ಗೆ ಖಾದರ್, ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು . ಹತ್ಯೆಯಲ್ಲಿ ಮೊಹಮ್ಮದ್ ಮುಸ್ತಫಾನ ಪಾತ್ರವೇನು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಯಾಕೆ ಅಷ್ಟೊಂದು ಕಾಳಜಿ? ತನಿಖೆ ವಿಚಾರದಲ್ಲಿ ಹೇಳಿಕೆ ಕೊಡಲು ಅವರು ಯಾರು? ಉಸ್ತುವಾರಿ ಸಚಿವರೇ ?
ಬಂಧನವಾಗುವ ಮೊದಲೇ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಟ್ಟಿರುವ ಯು.ಟಿ.ಖಾದರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಸ್ತಫನ ಜೊತೆಗೆ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಬಜ್ಪೆ ಶಾಂತಿಗುಡ್ಡೆಯ ನಿಯಾಝ್ ಮೀನು ವ್ಯಾಪಾರ ಮಾಡಿಕೊಂಡಿದ್ದನು. ಕೊಲೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಶಾಮೀಲಾಗಿದ್ದಾರೆ. ಆದರೆ ಪೊಲೀಸರು 8 ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಮುಸ್ತಫನ ಆಪ್ತರು ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವಾಗ ಪೊಲೀಸರು ಆತನನ್ನು ಇನ್ನೂ ಯಾಕೆ ಬಂಧಿಸಿಲ್ಲ? ಹತ್ಯೆಗೂ ಮುನ್ನ ಡಿನ್ನರ್ ಪಾರ್ಟಿ ನಡೆದಿತ್ತು. ಇದರ ಆಯೋಜಕರು ಯಾರು? ಹತ್ಯೆಗೆ ಕಾರು, ಬೈಕ್, ಪಿಕ್ಅಪ್ ವಾಹನ ಒದಗಿಸಿದವರು ಯಾರು ಎಂದು ಕುಂಪಲ ಪ್ರಶ್ನಿಸಿದರು.
ಈ ತನಿಖೆಯಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಪ್ರಕರಣದ ಬಗ್ಗೆ ಎನ್‌ಐಎ ತನಿಖೆಯಾಗಬೇಕು. ಕೇವಲ 5 ಲಕ್ಷದ ಡೀಲ್ ಅಲ್ಲ, ದೊಡ್ಡ ಮಟ್ಟದ ಡೀಲ್ ಆಗಿದೆ. ಈ ಪ್ರಕರಣದ ಬಗ್ಗೆ ಹಲವು ಅನುಮಾನಗಳಿವೆ. ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿಲ್ಲ. ಪೊಲೀಸ್ ಇಲಾಖೆಗೆ ಒತ್ತಡ ಹಾಕುವ ಖಾದರ್ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮೇಯರ್ ಗಳಾದ ಸುಧೀರ್ ಕುಮಾರ್, ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.