ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ

ಬಳ್ಳಾರಿ: ಓಬಳಾಪುರಂ ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜನಾರ್ಧನ ರೆಡ್ಡಿಯನ್ನು ದೋಷಿ ಎಂದು ಸಿಬಿಐ ನ್ಯಾಯಾಲಯ ಘೋಷಿಸಿದ್ದು, 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಹೈದರಾಬಾದ್ ನ ನಾಮಪಲ್ಲಿಯಲ್ಲಿರೋ ಸಿಬಿಐ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಹಿತ ಇತರರು ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಈಗಾಗಲೇ ಜನಾರ್ಧನ ರೆಡ್ಡಿ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

MLA Janardhana Reddy

ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಸೋಮವಾರವೇ ಹೈದರಾಬಾದ್‌ಗೆ ತೆರಳಿದ್ದರು ಇಂದು ವಿಚಾರಣೆ ನಡೆಸಿದ ನಾಮಪಲ್ಲಿಯಲ್ಲಿರೋ ಸಿಬಿಐ ಕೋರ್ಟ್ ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ಪ್ರಕಟಿಸಿ, ಶಿಕ್ಷೆಯ ಪ್ರಮಾಣವನ್ನು ಕೂಡ ಘೋಷಿಸಿದೆ. ಪ್ರಕರಣದಲ್ಲಿ A1 ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ್ ರೆಡ್ಡಿ, A4 ಅಲಿಖಾನ್ ಅಪರಾಧಿಗಳಾಗಿದ್ದಾರೆ. ಬೆಳಿಗ್ಗೆ ದಾಖಲಾತಿ ಪರಿಶೀಲಿಸಿದ ಕೋರ್ಟ್ ಮಧ್ಯಾಹ್ನದ ನಂತರ ತೀರ್ಪು ಪ್ರಕಟಿಸಿತು. ತೀರ್ಪು ಬಳಿಕ ರೆಡ್ಡಿ ಒಂದು ಕ್ಷಣ ಕುಸಿದು ಹೋದರು ಎಂದು ವರದಿ ತಿಳಿಸಿದೆ.

ಗಡಿ ಗುರುತು ನಾಶ ಮತ್ತು ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪದ ಮೇಲೆ ಸೆಕ್ಷನ್ 120 ಮತ್ತು 120ಬಿ ಅನ್ವಯ ಗಾಲಿ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಬಂಧನವಾಗಿತ್ತು. ಐಪಿಸಿ ಸೆಕ್ಷನ್ 120ಬಿ, 379, 411, 420, 422 ಮತ್ತು 447ರ ಅಡಿಯಲ್ಲಿ ಹಾಗೂ ಗಣಿಗಾರಿಕೆ ಮತ್ತು ಅರಣ್ಯ, ಖನೀಜ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಗಾಲಿ ಜನಾರ್ದನ ರೆಡ್ಡಿ ಅವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಒಎಂಸಿಯಿಂದ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಬ್ಬಿಣದ ಅದಿರನ್ನು ವಿವೇಚನಾರಹಿತವಾಗಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪಗಳಿತ್ತು. ಅಕ್ರಮ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರದಲ್ಲಿ ಆರೋಪ ಹೊತ್ತುಕೊಂಡಿದ್ದು, ಇನ್ನೂ ಸಿಬಿಐ ತನಿಖೆ ನಡೆಸುತ್ತಿತ್ತು.

ಈ ಪ್ರದೇಶದಲ್ಲಿ ಜಿ. ಜನಾರ್ದನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವ, ಪಾಲುದಾರತ್ವ ಮತ್ತು ಗಣಿ ಕಂಪನಿಯಲ್ಲದೆ ಗಣಿ ಗುತ್ತಿಗೆ, ಗಡಿ ರೇಖೆ ತಿದ್ದಿರುವುದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅನಂತಪುರಂ ಮೈನಿಂಗ್ ಕಾರ್ಪೊರೇಷನ್, ಓಬಳಾಪುರಂ ಮೈನಿಂಗ್ ಕಂಪನಿ, ಅಂತರಗಂಗಮ್ಮ ಮೈನಿಂಗ್ ಕಂಪನಿ, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹಾಗೂ ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಗಳು ಸುದ್ದಿಯಲ್ಲಿದ್ದವು

error: Content is protected !!