ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ NIA ತನಿಖೆ ನಡೆಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಆಗ್ರಹಿಸಿದ್ದು, ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಹಿಂದೂ ಆ್ಯಂಟಿ ಕಮ್ಯೂನಲ್ ಫೋರ್ಸ್ ತರಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತಾಡಿದ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ರಾಜ್ಯ ಗೃಹ ಸಚಿವ ಪರಮೇಶ್ವರ್ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯದೇ ಕೇವಲ ಮುಸ್ಲಿಂ ಮುಖಂಡರ ಅಭಿಪ್ರಾಯವನ್ನು ಮಾತ್ರ ಪಡೆದುಕೊಂಡಿದ್ದಾರೆ. ಇಂತಹ ತನಿಖೆಯಲ್ಲಿ ನ್ಯಾಯ ಸಿಗಬಹುದೇ ಎಂದು ಕುಂಪಲ ಪ್ರಶ್ನಿಸಿದ್ದಾರೆ.
ಗೃಹ ಸಚಿವರು ಹಿಂದೂ ಆ್ಯಂಟಿ ಕಮ್ಯೂನಲ್ ಫೋರ್ಸ್ ಮಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ಶಾಂತಿಯ ವಾತಾವರಣ ಬಿಟ್ಟು, ಅಶಾಂತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ. ಸ್ಪೀಕರ್ ಯು ಟಿ ಖಾದರ್ ಅವರು ಎಲ್ಲರಿಗೂ ನ್ಯಾಯ ಕೊಡಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅವರ ಭಾವನೆ ಬೇರೆಯೇ ಇದೆ. ಹತ್ಯೆಯಲ್ಲಿ ಫಾಸಿಲ್ ಕುಟುಂಬ ಇಲ್ಲ ಎಂದು ತೀರ್ಪು ನೀಡಿದ್ದಾರೆ. ಆದರೆ ಅವರ ಹೇಳಿಕೆ ಸುಳ್ಳಾಗಿದೆ. ಫಾಝಿಲ್ ಸಹೋದರನೇ ಈ ಕೃತ್ಯದಲ್ಲಿ ನೇರ ಶಾಮೀಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದರು. ಕಾನೂನೇ ಇವರ ಕೈಯಲ್ಲಿ ಇದ್ದ ಹಾಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಯು ಟಿ ಖಾದರ್ ಅವರ ಜೆಹಾದಿ ಬಣ್ಣ ಬಯಲಾಗಿದೆ ಎಂದರು. ಈ ಪ್ರಕರಣವನ್ನು ಎನ್‌ಐಎ ಮೂಲಕ ತನಿಖೆಗೆ ನೀಡಬೇಕು ಎಂದು ಸತೀಶ್ ಕುಂಪಲ ಹೇಳಿದರು.