ಮಂಗಳೂರು: ಮಂಗಳೂರಿನ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿನ್ನೆಲೆ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್‌ನಿಂದ ಇಡೀ ಜಿಲ್ಲೆ ಸ್ತಬ್ದವಾಗಿದೆ. ಮೃತರ ಅಂತ್ಯಕ್ರಿಯೆ ಬಂಟ್ವಾಳದಲ್ಲಿ ನಡೆಯಲಿದ್ದು, ಹಿಂದೂ ಕಾರ್ಯಕರ್ತರು ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಹುಟ್ಟೂರು ಬಂಟ್ವಾಳಕ್ಕೆ ತರಲಾಗಿದೆ. ರೋಡಿಗಿಳಿದ ಕೆಎಸ್‌ಆರ್‌ಟಿಸಿಯ ಮೈಸೂರು, ಪುತ್ತೂರುಗಳಿಗೆ ಸಂಚರಿಸುವ ಆರು ಬಸ್ ಗಳಿಗೆ ಕಲ್ಲು ತೂರಾಟ ಮಾಡಿ ಗಾಜುಗಳನ್ನು ಒಡೆಯಲಾಗಿದೆ. ಈ ಕಾರಣ ತಾತ್ಕಾಲಿಕವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಮಂಗಳೂರು ಕಮಿಷನರೇಟ್ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 6ರ ಬೆಳಗ್ಗೆ ವರೆಗೆ ಸೆಕ್ಷನ್ ಜಾರಿಗೊಳಿಸಲಾಗಿದೆ. ಅಹಿತಕರ ಘಟನೆ ತಪ್ಪಿಸಲು ಜಿಲ್ಲೆಯ ಎಲ್ಲೆಡೆ ಆಯಕಟ್ಟಿನ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ, ಮಂಗಳೂರು ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಡಿಜಿಪಿ ಆರ್. ಹಿತೇಂದ್ರ, ಶಾಂತಿ ಕಾಪಾಡಲು ಜನರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಆರೋಪಿಗಳ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲೇ ಬಂಧನ ಮಾಡುತ್ತೇವೆ ಎಂದಿದ್ದಾರೆ.
ಕೃತ್ಯದ ಕುರಿತಂತೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ಯಾರು ಕೃತ್ಯ ಎಸಗಿದ್ದಾರೋ ಅವರನ್ನು ಯಾವುದೇ ಕಾರಣಕ್ಕು ಬಿಡುವುದಿಲ್ಲ ಎಂದರು.
ಮಂಗಳೂರು ಶಾಂತಿಗೆ ಬರುತ್ತಿತ್ತು. ಕಳೆದ ನಾಲ್ಕೈದು ದಿನದಿಂದ ಆದ ಘಟನೆ ಮತ್ತು ನಿನ್ನೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ನಾವು ಇದನ್ನು ಹೀಗೆ ಮುಂದುವರಿಯಲು ಯಾವುದೇ ಕಾರಣಕ್ಕು ಬಿಡುವುದಿಲ್ಲ. ಆರೋಪಿಗಳ ಪತ್ತೆಗಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಶೋಧ ನಡೆಸಿದ್ದಾರೆ. ಇನ್ನು ಮುಂದೆಯೂ ಇಂತಹ ಘಟನೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಶಾಂತಿಯನ್ನು ಕಾಪಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮನವಿ ಮಾಡುತ್ತೇನೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿಮ್ಮ ಜೊತೆಯಲ್ಲಿದೆ. ಶಾಂತಿ ಕಾಪಾಡಲು ಎಲ್ಲ ರೀತಿಯ ಪ್ರಯತ್ನವನ್ನು ನಾವು ಮಾಡುತ್ತೇವೆ. ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಬಾರದು ಎಂಬ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಬಿಜೆಪಿ ಮುಖಂಡರ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ಯಾರು ಕೂಡ ಕೊಲೆ ಆಗಬೇಕು ಎಂದು ಬಯಸುವುದಿಲ್ಲ. ಜವಾಬ್ಧಾರಿಯುತ ಸರ್ಕಾರವಾಗಿ ಶಾಂತಿ ಸುವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ಧಾರಿ. ಈ ಜವಾಬ್ಧಾರಿಯಿಂದ ನಾವು ನುಣುಚಿಕೊಳ್ಳುವುದಿಲ್ಲ. ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂತಹ ಘಟನೆಗಳಾದಾಗ ಕಾನೂನು ಪ್ರಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡಿದ್ದೇವೆ. ಇದನ್ನು ಬಿಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹಿಂದು ಕಾರ್ಯಕರ್ತರಿಗೆ ಜೀವಭಯವಿದೆ, ಉಳಿಗಾಲವಿಲ್ಲ ಎಂದಿರುವ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಬೇರೆಯವರಿದ್ದಾರ? ಹಿಂದುಗಳಿಲ್ಲವೇ? ನಾವೆಲ್ಲ ಹಿಂದುಗಳಲ್ಲವ? ನಾವು ಬೇರೆಯವರ? ಆ ರೀತಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಕೊಲೆಯಾಗಿದೆ ಆರೋಪಿಗಳನ್ನು ಹಿಡಿದು ಹಾಕುತ್ತೇವೆ. ಘಟನೆಗೆ ಬೇರೆಬೇರೆ ಬಣ್ಣಕಟ್ಟುವುದು ಬೇಡ. ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.