ಬಿಹಾರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ನರಮೇಧದ ಬಳಿಕ ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದಿದ್ದ ಪ್ರಧಾನಿ ಮೋದಿ ಇಂದು ಬಿಹಾರದ ಮಧುಬನಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮ ಹಿನ್ನೆಲೆಯಲ್ಲು ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕಾಶ್ಮೀರ ಪಹಲ್ಗಾಮ್ ಪ್ರದೇಶದಲ್ಲಿ ನಮ್ಮ ದೇಶದ ಪ್ರಜೆಗಳನ್ನು ಪಾಪಿ ಪಾಕಿಸ್ತಾನದ ಉಗ್ರರು ಹತ್ಯೆ ಮಾಡಿರುವ ವಿಚಾರ ಪ್ರಸ್ತಾಪಿಸಿದರು. ಅಲ್ಲದೇ ಉಗ್ರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರ ಕಥೆ ಮುಗಿಸುವ ಶಪಥ ಮಾಡಿದ್ದಾರೆ.
ಆದರೆ ಪ್ರಧಾನಿ ಮೋದಿ ರ್ಯಾಲಿಯಲ್ಲಿ ಪಾಲ್ಗಿಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಪ್ರಧಾನಿಯವರು ಪಹಲ್ಗಾಮ್ ನಲ್ಲಿ ನಡೆದಿರುವ ನರಮೇಧದ ಬೆಂಕಿ ಆರುವ ಮುನ್ನವೇ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ ಎಂದು ಟೀಕಿಸಿದ್ದಾರೆ. ಮೊನ್ನೆಯಷ್ಟೇ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಕೇಂದ್ರ ಸರಕಾರ, ಭದ್ರತೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಹೀಗಿರುವಾಗ ಎರಡೇ ದಿನದಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿರುವುದು ನೆಟ್ಟಿಗರನ್ನು ಕೆರಳಿಸಿದೆ.
ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳು, ಕಾಶ್ಮೀರದ ಸುಂದರ ವಾತಾವರಣದಲ್ಲಿ ಸುತ್ತಾಡುವ ಸಮಯದಲ್ಲೇ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಅಮಾಯಕರ ಮೇಲೆ ಶೂಟ್ ಮಾಡಿ ಹತ್ಯೆಯನ್ನು ಮಾಡಿದ್ದರು. ಪಾಪಿ ಉಗ್ರರ ಈ ಕೃತ್ಯ ಇದೀಗ ಜಾಗತಿಕ ಮಟ್ಟದಲ್ಲೂ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಪ್ರಧಾನಿ ಮೋದಿ ಅವರು ಪಾಪಿ ಪಾಕಿಸ್ತಾನದ ಉಗ್ರರನ್ನು ಯಾರೂ ಊಹಿಸದ ರೀತಿ ಹೊಡೆದು ಹಾಕುತ್ತೀವಿ ಎಂದು ಹೇಳಿದ್ದಾರೆ.
ಆದರೆ ನರೇಂದ್ರ ಮೋದಿ ಸರಕಾರ ಕಳೆದ 12 ವರ್ಷಗಳಲ್ಲಿ ಉಗ್ರರ ವಿರುದ್ಧ ಕೈಗೊಂಡ ಕಠಿಣ ಕ್ರಮಗಳು ಏನೇನೂ ಸಾಲದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.