ಏನದು ಪುರುಷ ಕಟ್ಟುವ ಆಚರಣೆ? ಇದಕ್ಕೂ ಇಸ್ಲಾಂಗೂ ಏನು ಸಂಬಂಧ?

ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೆರಾಡಿಯಲ್ಲಿ ʼಪುರುಷ ಕಟ್ಟುವʼ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಮರನ್ನು ಅವಮಾನಿಸಿದ ಆರೋಪ ಕೇಳಿಬಂದಿದೆ. ಅಲ್ಲದೆ ಮುಸ್ಲಿಮರ ತರ ಉಡುಪು ಧರಿಸಿ ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಅಝಾನ್ ಅನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಹಲವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ʻಪುರುಷ ಕಟ್ಟುವʼ ಆಚರಣೆಯ ಬಗ್ಗೆ ಜನರಿಗೆ ಕುತೂಹಲ ಮೂಡಲಾರಂಭಿಸಿದೆ.

ಹಾಗಾದರೆ ಏನದು ಪುರುಷ ಕಟ್ಟುವ ಆಚರಣೆ? ಇದಕ್ಕೂ ಇಸ್ಲಾಂಗೂ ಏನು ಸಂಬಂಧ?

ಇದನ್ನು ಕೆಲವು ಕಡೆಗಳಲ್ಲಿ ಸಿದ್ಧವೇಶ ಎಂದೂ ಕರೆಯಲಾಗುತ್ತದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಊರವರು ಸುಗ್ಗಿ ಹುಣ್ಣಿಮೆ ಸಂದರ್ಭ ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಮೂರು ಅಥವಾ ಐದು ದಿನ ಮನೆಮನೆಗಳಿಗೆ ಹೋಗಿ ಕುಣಿತ ಸಹಿತ ಆಚರಿಸುವ ಜಾನಪದ ಕಲಾಪ್ರಕಾರವೇ ಸಿದ್ಧವೇಷ. ಸುಳ್ಯ ಭಾಗದಲ್ಲಿ ಇದನ್ನು ಸಿದ್ಧವೇಷ ಎಂದು ಕರೆದರೆ ಬೆಳ್ತಂಗಡಿ-ಪುತ್ತೂರು ಭಾಗದಲ್ಲಿ ʻಪುರುಷ ವೇಷʼ ಎನ್ನುತ್ತಾರೆ.

ತುಳುನಾಡಿನ ಜನಪದ ಕುಣಿತಗಳಲ್ಲಿ ಆಚರಣಾತ್ಮಕ ಕುಣಿತಗಳು ಮತ್ತು ಮನೋರಂಜನಾತ್ಮಕ ಕುಣಿತಗಳೆಂಬ ಎರಡು ರೀತಿಯ ಕುಣಿತಗಳಿವೆ. ಅದರಲ್ಲಿ ಪ್ರಮುಖ ಕುಣಿತಗಳಲ್ಲಿ ಒಂದು ‘ಪುರುಷರ ಕುಣಿತ’. ಈ ಕುಣಿತ ಐವೆರ್ ಪುರುಷೆರ್, ಪುಂಡುಪುರುಷೆರ್, ಮಾಯಿದ ಪುರುಷೆರ್, ಜೋಗಿ ಪುರುಷೆರ್ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು. ಹಿಂದೆ ನಾಥ ಪಂಥದ ಪ್ರಚಾರ ಇದರ ಹಿಂದಿನ ಉದ್ದೇಶವಾಗಿತ್ತು. 10-15 ವೇಷಧಾರಿಗಳ ಸಹಿತ ನೂರಾರು ಮಂದಿ ಒಟ್ಟಾಗಿ ಊರಿನ ಗುತ್ತಿನ ಮನೆಯಿಂದ ಆರಂಭಿಸಿ ಮನೆ ಮನೆಗೆ ಕುಣಿತ ಮಾಡಿಕೊಂಡು ಹೋಗಿ ಪ್ರತಿಯೊಂದು ಮನೆಯಲ್ಲೂ ತಾವು ಧರಿಸಿದ ಪಾತ್ರದ ಪ್ರದರ್ಶನವನ್ನು ನೀಡುತ್ತಾರೆ. ನಾಥ ಪಂಥದ ಪ್ರಮುಖ ದೇವರು ಕದ್ರಿ ಮಂಜುನಾಥನನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯುತ್ತದೆ.

ಹಿನ್ನೆಲೆ: ಒಬ್ಬಳು ಹೆಂಗಸು ತನಗೆ ಮಕ್ಕಳು ಇಲ್ಲದೆ ಕೊರಗುತ್ತಿರುವಾಗ ಒಂದು ಸಂದರ್ಭದಲ್ಲಿ ಕದ್ರಿಮಂಜುನಾಥ ದೇವರಿಗೆ ಹರಕೆ ಹೇಳಿಕೊಳ್ಳುತ್ತಾಳೆ. ದೇವರ ಅನುಗ್ರಹದಿಂದ ಅವಳಿಗೆ ಐದು ಜನ ಗಂಡುಮಕ್ಕಳು ಹುಟ್ಟುತ್ತಾರೆ. ಹರಕೆ ತೀರಿಸಲು ಕದ್ರಿ ಮಂಜುನಾಥನ ಸನ್ನಿಧಾನಕ್ಕೆ ಹೋದಾಗ ಆ ಐವರು ಮಕ್ಕಳು ಅದೃಶ್ಯರಾಗುತ್ತಾರೆ.
ಆಗ ಅತೀವ ದುಃಖಿತಳಾದ ತಾಯಿಗೆ ಮಂಜುನಾಥ ಸ್ವಾಮಿಯು ದರ್ಶನವಾಗಿ ಅಭಯವನ್ನು ನೀಡುತ್ತಾನೆ. ಅದೇನೆಂದರೆ ‘ಪುರುಷ ಕುಣಿತ’ ಎಂಬ ಆಚರಣೆಯನ್ನು ಮಾಡಿ ಅದರಲ್ಲಿ ಐವರು ಮಕ್ಕಳನ್ನು ಕಾಣು ಎಂಬ ಮಾತನ್ನು ನೀಡಿ ಆಶೀರ್ವಾದ ನೀಡುತ್ತಾರೆ. ಆ ಮಕ್ಕಳೇ ಇಂದು ಪುರುಷ ಕುಣಿತದಲ್ಲಿ ನಾವು ಕಾಣುವ ಹಾಳೆಯ ಕಿರೀಟವನ್ನು ಸಾಂಕೇತಿಕವಾಗಿ ಧರಿಸಿರುವ ಮಕ್ಕಳಾಗಿರುತ್ತಾರೆ.

ಪುರುಷ ಕುಣಿತವನ್ನು ನಾಥ ಪಂಥದ ಮೂಲತಃ ಅನುಯಾಯಿಗಳಾದ ಗೌಡ ಜನಾಂಗದವರು ಹಿಂದಿನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಬ್ರಾಹ್ಮಣ, ಜೈನ, ಪರಿಶಿಷ್ಠ ಹಾಗೂ ಅನ್ಯಧರ್ಮದವರನ್ನು ಹೊರತುಪಡಿಸಿ ಉಳಿದ ಸವರ್ಣೀಯರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಮಂಜುನಾಥಲ್ಲದೆ ದೈವವಾಗಿ ಕೊಡಮಣಿತ್ತಾಯ (ಮಾಣಿಯೆಚ್ಚಿ), ನಿಯಂತ್ರಕ ಪಾತ್ರಧಾರಿಗಳಾಗಿ 2-3 ಮುಸ್ಲಿಂ ವೇಷಧಾರಿಗಳು ಇವರನ್ನು ಸಾಯಿಬರು ಎಂದು ಕರೆಯಲಾಗುತ್ತದೆ.
ಕರಡಿ, ಕಾಲೆ, ಸ್ತ್ರೀವೇಷ, ಬೈದೆರ್ಲು, ಭೂತ, ಪಂಡಿತ, ಕಳ್ಳ, ಸಿಂಗಾರಿ, ಬ್ರಾಹ್ಮಣ, ಕಿರೀಟ, ಮ*ನ್‌*ಸೆ, ನರ್ಸಣ್ಣ, ಕ್ರೈಸ್ತ, ಸವಾಲೆ ಬೀಸುವುದು ಇತ್ಯಾದಿ ಜಾತಿ ಸಂಬಂಧಿ, ವೃತ್ತಿ ಸಂಬಂಧಿ, ಪ್ರಾಣಿ ಸಂಬಂಧಿ, ಆಚರಣಾ ಸಂಬಂಧಿ ವೇಷಗಳಿರುತ್ತದೆ. ವಾದ್ಯ ಪರಿಕರಗಳಾಗಿ ಟಾಸೆ, ಡೋಳು, ನಾಗಸ್ಪರ, ಶ್ರುತಿ ಇರುತ್ತದೆ. ಸುಗ್ಗಿಯ ಸಂದರ್ಭ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಮನೆ ಮನೆಗೆ ತೆರಳಿ ಕುಣಿಯುತ್ತಾರೆ. ಮೋಡಿ ಭಾಷೆಯನ್ನಾಡುತ್ತಾ, ತಮಾಷೆಯ ಮಾತುಗಳನ್ನಾಡುತ್ತಾರೆ.

ಈ ವೇಷಧಾರಿಗಳು ಪ್ರತಿಯೊಂದು ಮನೆಗೆ ಪ್ರವೇಶಿಸುವಾಗ ಮನೆಯ ಯಜಮಾನ ದೀಪವನ್ನು ಬೆಳಗಿಸಿಡಬೇಕು. ಯಾವ ಮನೆಯಲ್ಲಿ ದೀಪ ಬೆಳಗಿಸಿಡದೇ ತಾತ್ಸಾರ ಮಾಡುತ್ತಾರೋ ಅವರ ಭೂಮಿ ನಿರ್ನಾಮವಾಗುತ್ತದೆ, ಮನೆಗೆ ಬಾಗಿಲು ಬೀಳುತ್ತದೆ ಎಂಬ ನಂಬಿಕೆ ಇದೆ. ಇದೇ ರೀತಿ ಆಗಿರುವ ಘಟನೆಗಳೂ ತುಳುನಾಡಿನ ಇತಿಹಾಸದಲ್ಲಿದೆ ಸಾಕಷ್ಟು ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮನೆಮನೆಗೆ ಪುರುಷ ವೇಷಧಾರಿಗಳಿಗೆ ಹರಕೆಯ ರೂಪದಲ್ಲಿ 1 ಸೇರು ಅವಲಕ್ಕಿ, 1 ಕೆ.ಜಿ. ಅವಲಕ್ಕಿ, 1 ತೆಂಗಿನಕಾಯಿ, ಇಂತಿಷ್ಟು ಕಾಣಿಕೆ ಅಥವಾ ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಹರಕೆಯನ್ನು ನೀಡಬಹುದು.

ಪುರುಷ ಕುಣಿತ ಪೂಜೆಯನ್ನು ಸಂತಾನಪ್ರಾಪ್ತಿ, ರೋಗರುಜಿನ ನಿವಾರಣೆಗಾಗಿ ಮಾಡಲಾಗುತ್ತದೆ. ಈ ಹರಕೆಯಿಂದ ಏಳಲಾಗದೆ ಮಲಗಿದ್ದ ಮಕ್ಕಳು ಎದ್ದು ಕೂತ ಉದಾಹರಣೆಗಳಿವೆ. ಗೊನೆ ಬಿಡದ ಕಂಗು, ತೆಂಗುಗಳು ಗೊನೆ ಬಿಟ್ಟಿವೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಯಾರೇ ರೋಗಿಗಳು ಬೇಕಾದಷ್ಟು ಔಷಧಿಗಳನ್ನು ಮಾಡಿ ಆ ಕಾಯಿಲೆಗಳು ಗುಣವಾಗದೇ ಇದ್ದಾಗ, ಪುರುಷರು ಬಾಯಿಗೆ ನೀರು ಕೊಟ್ಟು, ಗಂಧ ಕೊಟ್ಟು ಗುಣಮುಖರಾಗಿರುವ ಘಟನೆಗಳು ಬೇಕಾದಷ್ಟಿದೆ. ಭಕ್ತರು ಯಾರೇ ಬಂದರೂ ಭಕ್ತಿಯಿಂದ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಹರಕೆ ಹೊತ್ತರೆ ಈಡೇರುತ್ತದೆ ಎನ್ನುವ ನಂಬಿಕೆ ಪ್ರಚಲಿತದಲ್ಲಿದೆ.

ಪುರುಷ ಕುಣಿತ ಪೂಜೆಯನ್ನು, ಊರಿನ ದುಷ್ಟ ಶಕ್ತಿಗಳನ್ನು ಓಡಿಸುವುದರ ಪ್ರತೀಕವಾಗಿ ಪುಂಡು ಪುರುಷರ ಆಚರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸುಗ್ಗಿ ಹುಣ್ಣಿಮೆಯ ಮೂರು ದಿನಕ್ಕೆ ಮುಂಚೆ ಪುರುಷರ ಕುಣಿತವನ್ನು ಮಾಡಿ, ಸುಗ್ಗಿ ಹುಣ್ಣಿಮೆಯ ಮರುದಿವಸ ಎಲ್ಲರೂ ಒಟ್ಟುಗೂಡಿ ರಾಶಿಪೂಜೆಯನ್ನು ಮಾಡಲಾಗುತ್ತದೆ.

ಈ ಪುರುಷ ಕುಣಿತದಲ್ಲಿ ಮುಖ್ಯವಾದ ವೇಷಗಳೆಂದರೆ ಹುಲಿವೇಷ, ವಧು-ವರ, ಕುಮಾರ, ಕೆಲವೊಮ್ಮೆ ಮುಸ್ಲಿಂ ಬಂಧುಗಳ ವೇಷಧರಿಸಿ ಮೋಡಿ ಮಾತುಗಳೊಂದಿಗೆ ತಮಾಷೆ ಮಾತುಗಳನ್ನಾಡುತ್ತಾ ಸಂಭಾಷಣೆ ನಡೆಸ್ತಾರೆ, ಈ ಸಂಭಾಷಣೆಯು ಯಾರಿಗೂ ಟೀಕೆ ಮಾಡುವ ಮಾತುಗಳಲ್ಲ, ಅದರ ಉದ್ದೇಶವೂ ಅಲ್ಲ. ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಇರಬೇಕೆಂಬ ನಿಟ್ಟಿನಲ್ಲಿ ಎಲ್ಲಾ ಧರ್ಮದ ವೇಷಭೂಷಣವನ್ನು ಧರಿಸಲಾಗುತ್ತದೆ ಎನ್ನುವುದು ಇದರ ತಿರುಳಾಗಿದೆ.

ಪುರುಷ ಕಟ್ಟುವ ಸಂಪ್ರದಾಯ ಹಿಂದಿನಂತೆ ಕಟ್ಟು ಪ್ರಕಾರ  ನಡೆದರೆ ಯಾರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಒಂದು ಧರ್ಮವನ್ನು ಅಣಕಿಸಲು ಹೋದರೆ ಅದರಿಂದ ಸಮಸ್ಯೆಯಾಗಬಹುದು. ಈ ಆಚರಣೆಯಲ್ಲಿ ಊರಿನ ಎಲ್ಲಾ ಧರ್ಮದ ಜನರು ಭಾಗಿಯಾಗುತ್ತಾರೆ. ಮುಸ್ಲಿಮರು, ಕ್ರೈಸ್ತರೂ ಭಾಗವಹಿಸುತ್ತಾ ಬಂದಿದ್ದಾರೆ. ಎಲ್ಲಾ ಮತದವರು ಒಟ್ಟಾಗಿ ನಡೆಸುತ್ತಿರುವ ಈ ಸಂಪ್ರದಾಯ ಇನ್ನೊಂದು ಮತದವರ ನಂಬಿಕೆಗೆ ಘಾಸಿಯಾಗದಂತೆ ನಡೆಯಬೇಕಿದೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

error: Content is protected !!