ಅಮರಾವತಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ಮೊಂತಾ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ವೇಗವಾಗಿ ಚಲಿಸುತ್ತಿದ್ದು, ಮಂಗಳವಾರ ಸಂಜೆ ಅಥವಾ ರಾತ್ರಿ ವೇಳೆಗೆ ಕಾಕಿನಾಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ಬೆಳಿಗ್ಗೆ 9:30ಕ್ಕೆ ಬಿಡುಗಡೆಗೊಂಡ ವರದಿ ಪ್ರಕಾರ, ಮೊಂತಾ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಉತ್ತರದಿಂದ ವಾಯುವ್ಯ ದಿಕ್ಕಿಗೆ ಚಲಿಸಿ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ.
ಐಎಂಡಿ ಮಹಾನಿರ್ದೇಶಕ ಡಾ. ಎಂ. ಮೊಹಾಪಾತ್ರ ನೀಡಿದ ಮಾಹಿತಿಯ ಪ್ರಕಾರ, ಚಂಡಮಾರುತವು ಆಂಧ್ರ ಕರಾವಳಿಯನ್ನು ಅಪ್ಪಳಿಸಿದ ನಂತರ ನಿಧಾನವಾಗಿ ದುರ್ಬಲಗೊಂಡು ಒಡಿಶಾ ರಾಜ್ಯದತ್ತ ಚಲಿಸುವ ಸಾಧ್ಯತೆ ಇದೆ. ಮೊದಲಿಗೆ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಪರಿಣಾಮ ಕಂಡುಬರುವುದು, ನಂತರ ಒಡಿಶಾ ಮತ್ತು ಛತ್ತೀಸ್‌ಗಢ ಪ್ರದೇಶಗಳಲ್ಲಿ ಮಳೆ ಮತ್ತು ಗಾಳಿಯ ಪ್ರಭಾವ ಮುಂದುವರಿಯುತ್ತದೆ,” ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 28 ರಿಂದ 30 ರವರೆಗೆ ಆಂಧ್ರಪ್ರದೇಶ, ಒಡಿಶಾ, ಛತ್ತೀಸ್‌ಗಢ ಮತ್ತು ತಮಿಳುನಾಡುಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಸಾರಿಗೆ ಅಸ್ತವ್ಯಸ್ತ
ದಕ್ಷಿಣ ಮಧ್ಯ ರೈಲ್ವೆ ಹಾಗೂ ಪೂರ್ವ ಕರಾವಳಿ ರೈಲ್ವೆ ಮಂಡಳಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಮುಂದಿನ ಎರಡು ದಿನಗಳಲ್ಲಿ 100 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿವೆ.
ಸನ್ನದ್ಧ ಸ್ಥಿತಿಗೆ ಮೋದಿ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಅಗತ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) 22 ತಂಡಗಳನ್ನು ನಿಯೋಜಿಸಿದೆ.
ಸುರಕ್ಷತಾ ಎಚ್ಚರಿಕೆ
ಸ್ಥಳೀಯ ಆಡಳಿತವು ಜನರಿಗೆ ಮನೆಯೊಳಗೇ ಇರಲು, ಕರಾವಳಿ ಪ್ರದೇಶದವರು ಪರಿಹಾರ ಶಿಬಿರಗಳಿಗೆ ತೆರಳಲು ಸೂಚಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರವಾಸಿ ತಾಣಗಳಾದ ಕಡಲತೀರಗಳನ್ನು ಮುಚ್ಚಲಾಗಿದೆ.
ಮೊಂತಾ ಎದುರಿಸಲು ಒಡಿಶಾ ಸಜ್ಜು
ಒಡಿಶಾ ಸರ್ಕಾರವು ದುರ್ಬಲ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, “ರೆಡ್ ಅಲರ್ಟ್” ಘೋಷಿಸಲಾದ ಎಂಟು ದಕ್ಷಿಣ ಜಿಲ್ಲೆಗಳಲ್ಲಿ ಈಗಾಗಲೇ ಲಘು ಮಳೆಯಾಗಿದೆ.
ಚಂಡಮಾರುತದ ಪಥ ಬದಲಾವಣೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆ ಕ್ರಮಗಳು ಕೈಗೊಳ್ಳಲಾಗಿದೆ.