ಬೆಂಗಳೂರು: ಬರೋಬ್ಬರಿ 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ನಾಯಿಯೊಂದನ್ನು ಖರೀದಿ ಮಾಡಿದ್ದಾಗಿ ರೀಲ್ಸ್ ಮಾಡಿ ಬಿಲ್ಡಪ್ ಕೊಡುತ್ತಿದ್ದ ಎಸ್. ಸತೀಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ನಾಯಿಯ ಅಸಲಿ ಬೆಲೆಯಲ್ಲಿ ಪತ್ತೆಹಚ್ಚಿ ಬೇಸ್ತು ಬಿದ್ದಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ನಿವಾಸಿಯಾದ ಎಸ್. ಸತೀಶ್ ಅವರು ಇದೇ ಜನವರಿಯಲ್ಲಿ ತೋಳ ಕಕೇಷಿಯನ್ ಶೆಫರ್ಡ್ ನಾಯಿಯ ಸಮ್ಮಿಲನದಿಂದ ಹುಟ್ಟಿದ ವಾಲ್‌ಡಾಗ್ ಖರೀದಿಸಿದ್ದೇನೆ. ಇದಕ್ಕಾಗಿ ಅವರು 50 ಕೋಟಿ ಪಾವತಿಸಿದ್ದೇನೆ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅರೆ ನಾಯಿಗೂ ಇಷ್ಟು ಬೆಲೆ ಇದೆಯಾ ಎಂದು ಮಾತಾಡಿಕೊಳ್ಳುತ್ತಿದ್ದರು. ಸತೀಶ್ ಅವರು ಈ ಹಿಂದೆ 28 ಕೋಟಿ ಕೊಟ್ಟು ನಾಯಿಯೊಂದನ್ನು ಖರೀದಿಸಿದ್ದರು ಎಂಬ ಸುದ್ದಿಯೂ ಹಬ್ಬಿತು.
ಹೀಗಾಗಿ, ಜೆಪಿ ನಗರದಲ್ಲಿರುವ ಸತೀಶ್‌ನ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡವು ಬುಧವಾರ ಬೆಳಗ್ಗೆ ದಾಳಿ ನಡೆಸಿ ನಾಯಿಯ ಮೂಲ ಬೆಲೆ ತಿಳಿದು ಬೇಸ್ತು ಬಿದ್ದಿದ್ದಾರೆ. ವಿಶೇಷವೆಂದರೆ ಸತೀಶ್‌ನ ಮನೆಯಲ್ಲಿ ಯಾವುದೇ 50 ಕೋಟಿ ರೂಪಾಯಿ ಬೆಲೆಯ ನಾಯಿಯು ಇರಲಿಲ್ಲ. ಅಲ್ಲದೆ ಅದು ತೋಳಕ್ಕೆ ಹುಟ್ಟಿದ ನಾಯಿಯೂ ಆಗಿರಲಿಲ್ಲ. ಯಾವುದೋ ಜಾತಿ ನಾಯಿ ಸಮಾ ತಿಂದು ಕೊಬ್ಬಿದ್ದಲ್ಲದೆ, ಹಾರ್ಮೋನ್ ಇಂಜೆಕ್ಷನ್ ಪರಿಣಾಮದಿಂದ ನಾಯಿ ಸ್ವಲ್ಪ ದಢೂತಿಯಾಗಿ ಬದಲಾಗಿದೆ ಎನ್ನುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಸಲಿಗೆ ನಾಯಿಯ ಮೂಲ ಬೆಲೆ ಜುಜುಬಿ ರೂ.1 ಲಕ್ಷವೂ ಇರಲಿಲ್ಲ ಎನ್ನುವುದು ಪತ್ತೆಯಾಗಿದೆ. ಸತೀಶ್‌ನ ಈ ಹೇಳಿಕೆಯ ಹಿಂದಿನ ಉದ್ದೇಶವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿರಬಹುದು ಎಂದು ಶಂಕಿಸಿ ಇ.ಡಿ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.