4 ಕೋಟಿಯ ಮನೆ 60 ಲಕ್ಷ‌ಕ್ಕೆ ಡೀಲ್: ಸಿಎಂ ಪದಕ ವಿಜೇತ ಇನ್ಸ್‌ಪೆಕ್ಟರ್‌ ಪಟಲಾಂ ಮೇಲೆ ಎಫ್‌ಐಆರ್

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಷ್ಠಿತ ಏರಿಯಾದಲ್ಲಿ ಇದ್ದ 4 ಕೋಟಿ ರೂ. ಮೌಲ್ಯದ ಮನೆಯನ್ನು ಕೇವಲ 60 ಲಕ್ಷ ರೂ.ಗೆ ಕಬಳಿಸಲು ಮುಂದಾಗಿದ್ದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಸೇರಿದಂತೆ ಅನ್ನ ಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಹಾಗೂ ಇತರೆ ನಾಲ್ವರು ಖಾಸಗಿ ವ್ಯಕ್ತಿಗಳು ಸೇರಿದಂತೆ 7 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.


ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಕುಮಾರ್, ಇಬ್ಬರು ಕಾನ್ಸ್‌ಟೇಬಲ್ ಸೇರಿ 7 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ಸ್‌ಪೆಕ್ಟರ್ ಎ ವಿ ಕುಮಾರ್ ಎ1 ಆರೋಪಿ ಆಗಿದ್ದಾರೆ.ಕಾನ್ಸ್‌ಟೇಬಲ್‌ಗಳಾದ ಉಮೇಶ್ ಹಾಗೂ ಅನಂತ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಮೂವರು ಸರ್ಕಾರಿ ನೌಕರರು, ಹಾಗು ನಾಲ್ವರು ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ.

ಆಸ್ತಿಯ ಮಾಲೀಕ ಚೆನ್ನೇಗೌಡ ಎನ್ನುವವರು ನೀಡಿದ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 7a ಅಡಿ ಎಫ್‌ಐಆರ್ ಆಗಿದೆ. ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ವೈಯಕ್ತಿಕ ಪ್ರಭಾವ ಬೀರುವುದು, ಹಾಗೂ ಅನಗತ್ಯ ಪ್ರಯೋಜನ ಪಡೆಯುವ ಅಪರಾಧವನ್ನು 7a ಅಡಿ ಉಲ್ಲೇಖ ಮಾಡಲಾಗಿದೆ. 3 ವರ್ಷಗಳಿಗಿಂತ ಕಡಿಮೆಯಿಲ್ಲದ 7 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡ ಒಳಗೊಂಡ 7a ಸೆಕ್ಷನ್ ಇದಾಗಿದೆ.

ಕಳೆದ ವಾರ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅನ್ನಪೂರ್ಣೇಶ್ವರಿ ಠಾಣೆ ಮೇಲೆ ದಾಳಿ ಮಾಡಿದ್ದರು. ಇದೇ ವೇಳೆ ಖಾಸಗಿ ಹೋಟೆಲ್‌ ಮೇಲೆಯೂ ದಾಳಿ ಮಾಡಿದ್ದು, ಅಲ್ಲಿ ₹4 ಕೋಟಿ ಮೌಲ್ಯದ ಕಟ್ಟಡವನ್ನು ಕೇವಲ ₹60 ಲಕ್ಷಕ್ಕೆ ಬರೆಸಿಕೊಳ್ಳಲು ಮುಂದಾಗಿದ್ದ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಪೊಲೀಸರಿಂದಲೇ ಕಟ್ಟಡವನ್ನು ಕಡಿಮೆ ಬೆಲೆಗೆ ಬರೆಸಿಕೊಳ್ಳಲು ಮುಂದಾಗಿರುವುದು ಕಂಡುಬಂದಿದೆ. ಇಬ್ಬರು ಕಾನ್ಸ್‌ಸ್ಟೇಬಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಮೀಟಿಂಗ್‌ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರ್ಯಾಪ್ ಕಾರ್ಯಾಚರಣೆ ಮಾಡಲಾಗಿತ್ತು.

ಇನ್ನು ದೂರುದಾರ ಚನ್ನೇಗೌಡ ಅವರ ಮನೆಯನ್ನು ತಮಗೆ ಬರೆದುಕೊಡುವಂತೆ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಚಿನ್ನದ ಪದಕ ಪಡೆಯಲು ಬೆಸ್ಟ್ ಇನ್ಸ್‌ಪೆಕ್ಟರ್ ಎಂಬ ಕೆಟಗರಿ ಅಡಿಯಲ್ಲಿ ಆಯ್ಕೆಯಾಗಿದ್ದ ಇನ್ಸ್‌ಪೆಕ್ಟರ್ ಎ.ವಿ.ಕುಮಾರ್ ದೊಡ್ಡ ಭ್ರಷ್ಟ ಅಧಿಕಾರಿ ಎಂಬ ಆರೋಪ ಕೇಳಿಬಂದಿದೆ. ಇದೀಗ ಲೋಕಾ ದಾಳಿ ಬಳಿಕ ಪದಕ ವಿತರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಇನ್ಸಪೆಕ್ಟರ್ ಪರಾರಿ ಆಗಿದ್ದಾರೆ.

error: Content is protected !!