ಎ.9-11ರವರೆಗೆ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ “ನಡಾವಳಿ ಉತ್ಸವ“

ಮಂಗಳೂರು: ನಗರದ ಹೃದಯ ಭಾಗವಾದ ಕೊಡಿಯಲ್‌ ಬೈಲ್‌ ಸ್ಥಿತವಾಗಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಸುಮಾರು ಹತ್ತು ಶತಮಾನಗಳಿಗೂ ಹೆಚ್ಚು ಭವ್ಯ ಇತಿಹಾಸವಿದ್ದು ಆದಿಶಕ್ತಿ ಶ್ರೀ ಭಗವತೀ ಮಾತೆಯು ಹದಿನಾಲ್ಕು ಸ್ವರೂಪಗಳಲ್ಲಿ ಶ್ರೀ ಚೀರುಂಭ ಭಗವತೀ – ನಾಲ್ವರು, ಶ್ರೀ ಪಾಡಾಂಗರ ಭಗವತೀ – ಐವರು, ಶ್ರೀ ಪುಲ್ಲೂರಾಳಿ ಭಗವತೀ – ಐವರು ಕಾರಣೀಕ ಮೆರೆದು ಭಕ್ತ ರಕ್ಷಕಿಯಾಗಿ ನೆಲೆನಿಂತುದರಿಂದ “ಕೂಟಕ್ಕಳ” ಎಂಬುದಾಗಿ ಖ್ಯಾತಿ ಪಡೆದಿದೆ. ತೀಯಾ ಸಮುದಾಯ
ಆರಾಧಿಸಿಕೊಂಡು ಬಂದಿದ್ದರೂ ಶ್ರೀ ಮಾತೆಯರು ಜಾತಿಯ ಚೌಕಟ್ಟನ್ನು ಮೀರಿ ಶರಣುಬಂದ ಭಕ್ತರನ್ನು ಹರಸಿ
ಕಾಯುತ್ತಿರುವುದರಿಂದ ಸ್ಥಳೀಯ ಭಕ್ತಾದಿಗಳಿಂದ ಶ್ರೀ ಕ್ಷೇತ್ರವು “ಗುತ್ಯಮ್ಮ ಸ್ಥಾನ’ವೆಂದೇ ಪ್ರಸಿದ್ಧಿ ಪಡೆದಿದೆ ಎಂದು ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರದ ವ್ಯಾಪ್ತಿಗೆ ಕೊಡಿಯಾಲ್‌ ಬೈಲ್, ಕದ್ರಿ, ಜೆಪ್ಪು, ಬೋಳಾರ, ಕಂಕನಾಡಿ, ನೆತ್ರಕೆರೆ, ಸಜಿಪ, ಚೇಳೂರು, ಇರಾ ಕಲ್ಲಾಡಿ,
ಪಜೀರು, ನೀರುಮಾರ್ಗ, ಪಡುಬೊಂಡಂತಿಲ, ಬೆಳ್ಳೂರು ಮೊದಲಾದ 13 ಗ್ರಾಮಗಳು, ಕೆಳಗಿನ ಮನೆ ತರವಾಡು, ಜಪ್ಪು, ವಿಷ್ಣುಮೂರ್ತಿ ಆದಿಕ್ಷೇತ್ರ, ಕಡವಿನ ಬಳಿ ಬೋಳಾರ ತರವಾಡು ಹಾಗೂ ಕದ್ರಿ ಕಣ್ಣಬೆಟ್ಟು ತರವಾಡು ಹೀಗೆ 4 ತರವಾಡುಗಳು ಒಳಪಟ್ಟಿದೆ.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಭೇಟಿ ನೀಡಿದ ಪರಮ ಪಾವನ ಕ್ಷೇತ್ರವಾಗಿದ್ದು, ಪ್ರಸ್ತುತ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.
ಕಳೆದ 18 ವರ್ಷಗಳಿಂದ ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಷೇತ್ರದಲ್ಲಿ ಶ್ರೀ ಮಾತೆಯರ ಪ್ರಸಾದ ರೂಪವಾಗಿ ಭಕ್ತಾದಿಗಳಿಗೆ
ಅನ್ನಸಂತರ್ಪಣೆ ಜರಗುತ್ತಿದ್ದು, ಸ್ಥಳೀಯ ವಿವಿಧ ವಿದ್ಯಾ ಸಂಸ್ಥೆಗಳ ಸುಮಾರು 700 ವಿದ್ಯಾರ್ಥಿಗಳ ಸಮೇತ 3000ಕ್ಕೂ ಹೆಚ್ಚು
ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದರು.
ಶ್ರೀ ಕ್ಷೇತ್ರದಲ್ಲಿ ಶ್ರೀ ಮಾತೆಯರಿಗೆ ಭರಣಿ ಮಹೋತ್ಸವ, ಪೆರುಂಕಳಿಯಾಟ, ನಡಾವಳಿ ಉತ್ಸವಗಳು ಕಾಲಕಾಲಕ್ಕೆ
ನಡೆಯುತ್ತಿದ್ದು, ಈ ಸಾಲಿನ ನಡಾವಳಿ ಉತ್ಸವವು ದಿನಾಂಕ ಎಪ್ರಿಲ್ 9ರಿಂದ 11ರವರೆಗೆ ವಿವಿಧ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳು, ಭಜನಾ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ
ವಿಜೃಂಭಣೆಯಿಂದ ಜರಗಲಿದೆ. ಈ ಸಂದರ್ಭದಲ್ಲಿ ಶ್ರೀ ಮಾತೆಯರ ಭವ್ಯ ಶೋಭಾಯಾತ್ರೆ ಹಾಗೂ ಪಾರಂಪರಿಕ ಪವಿತ್ರ ಕೆಂಡ ಸೇವೆ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣಾ ಸೇವೆ ಜರಗಲಿದೆ ಎಂದರು.
ವೇದಿಕೆಯಲ್ಲಿ ವಿಶ್ವನಾಥ್ ಕುಡುಪು, ಸುಧೀರ್ ಜೆಪ್ಪು, ಲೋಕೇಶ್, ಮೋಹನ್ ಮಜಿ, ಪುರುಷ ಸಾಲಿಯಾನ್, ರವೀಂದ್ರ, ಉಷಾ ಪ್ರಭಾಕರ್, ಆಶಾ ಚಂದ್ರಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

error: Content is protected !!