ಹರಿಕಥೆಯಿಂದ ಧರ್ಮಜಾಗೃತಿ: ಧರ್ಮದರ್ಶಿ ಹರಿಕೃಷ್ಣ ಪುನರೂರು| ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ ಅಭಿನಂದನಾ ಸಂಪುಟ ʻಮಹಾಪರ್ವʼ ಬಿಡುಗಡೆ

ಹರಿಕಥೆಯಿಂದ ಧರ್ಮಜಾಗೃತಿ: ಧರ್ಮದರ್ಶಿ ಹರಿಕೃಷ್ಣ ಪುನರೂರು| ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ ಅಭಿನಂದನಾ ಸಂಪುಟ ʻಮಹಾಪರ್ವʼ ಬಿಡುಗಡೆ

ಮಂಗಳೂರು: ಕೂಡ್ಲು ಮಹಾಬಲ ಶೆಟ್ಟರು ಹರಿಕಥೆಯ ಮೂಲಕ ಧರ್ಮ ಜಾಗೃತಿ ಮಾಡುತ್ತಾ ಇದ್ದಾರೆ. ಹರಿಕಥೆಯಿಂದ ನಮ್ಮ ಪುರಾಣಗಳನ್ನು ಕಲಿತು, ಮಕ್ಕಳು ರಾಮಕೃಷ್ಣನ ತತ್ವಗಳನ್ನು ಅರಿಯಲು ಸಾಧ್ಯವಾಗುತ್ತದೆ. ಜೊತೆಗೆ ಹರಿಕಥೆಯನ್ನು ಮಕ್ಕಳಿಗೆ ಕಲಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಧರ್ಮಜಾಗೃತಿ ಮಾಡುವ ಕೆಲಸವನ್ನು ದೇವರು ಕರುಣಿಸಲಿ, ಅವರ ಮನೆಯವರು ಇಂದಿಗೂ ಅವರಿಗೆ ಹರಿಕಥೆ ಮಾಡಲು ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಅವರು ಮಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ಇಂದು ನಡೆದ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ ಕುರಿತ, ಭಾಸ್ಕರ ರೈ ಕುಕ್ಕುವಳ್ಳಿ ಸಂಪಾದಕತ್ವದ ʻಮಹಾಪರ್ವʼ ಅಭಿನಂದನಾ ಸಂಪುಟ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾಪರ್ವ ಕೃತಿಯ ನಾಯಕ, ಪ್ರಸಿದ್ಧ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ ಮಾತನಾಡಿ, ಹರಿಕಥೆ ಎನ್ನುವುದು ನಶಿಸುವಂತಹ ಕಲೆಯಲ್ಲ, ಅದು ಜನರು ಪುನರ್‌ ಸ್ವೀಕರಿಸುವ ಕಲೆಯಾಗಿದೆ. ಹರಿಕಥೆ ನಮಗೆ ಒಲಿಯಬೇಕಾದರೆ ಜ್ಞಾನ ಸಂಗ್ರಹವಷ್ಟೇ ಅಲ್ಲದೆ, ಆ ಜ್ಞಾನ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು. ಹೀಗೆ ಸಾಧನೆಯಿಂದ ಒಲಿದ ಕಲೆ ಹರಿಕಥೆಯನ್ನು ಯುವಜನರು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂದರು.

ಹರಿಕಥೆಯ ಮೇಲೆ ನನಗೆ ಆಸಕ್ತಿ ಹುಟ್ಟಲು ಗುರುಗಳಾದ ಶೇಣಿಯವರೇ ಕಾರಣ. ಅವರು ನನ್ನಲ್ಲಿ ಹರಿಕಥೆಯನ್ನು ಗುರುತಿಸಿ ಹರಿಕಥೆ ಮಾಡುವಂತೆ ಸೂಚಿಸಿದರು. ಇಂದು ತನ್ನ ಕುರಿತ ಅಭಿನಂದನಾ ಕೃತಿ ಬಿಡುಗಡೆಗೊಂಡಿರುವುದಕ್ಕೆ ಸಹಕಾರ ನೀಡಿದವರನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇಂದು ನಾನು ಅಂದಿನಿಂದ ಇಂದಿನತಕ ಪರಿಶ್ರಮಪಟ್ಟಿದ್ದಕ್ಕೆ ಸಿಕ್ಕ ಫಲ. ಒಳ್ಳೆಯ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ ಎನ್ನುವುದಕ್ಕೆ ಇದು ದೃಷ್ಟಾಂತ ಎಂದು ಕೂಡ್ಲು ಮಹಾಬಲ ಶೆಟ್ಟಿ ಹೇಳಿದರು.

ದಕ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್‌ ಮಾತನಾಡಿ, ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗುವುದೆಂದರೆ ನನಗೆ ಅಚ್ಚುಮೆಚ್ಚು, ಹಿಂದಿನ ಕಾಲದಲ್ಲಿ ಸಾಧಕರ ಸಾಧನೆಯನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಪುಸ್ತಕಗಳ ಮೂಲಕ ದಾಖಲೀಕರಣ ಮಾಡಲಾಗುತ್ತಿದೆ. ಇಂತಹಾ ಪುಸ್ತಕದಿಂದ ನಮ್ಮ ಮುಂದಿನ ಜನಾಂಗಕ್ಕೆ ಹಿಂದಿನವರು ಮಾಡಿದ ಸಾಧನೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಮೂಲಕ ನಮ್ಮ ಭವಿಷ್ಯದ ಜನಾಂಗ ಪ್ರೇರಣೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕೃತಿಯ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಪುಸ್ತಕದ ಪರಿಚಯ ಮಾಡಿ, ಬಿಡುಗಡೆಗೊಳಿಸಿದರು. ಪತ್ರಕರ್ತ ಪಿ.ಬಿ. ಹರೀಶ್‌ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಬಲ ಶೆಟ್ಟಿ ಪುತ್ರ ಅಡ್ವೊಕೇಟ್‌ ಗುರುಪ್ರಸಾದ್‌ ಮಾತನಾಡಿದರು. ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು. ಜಿ.ಕೆ. ಭಟ್‌ ಧನ್ಯವಾದ ಸಮರ್ಪಿಸಿದರು.

 

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

error: Content is protected !!