ನವದೆಹಲಿ: ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill) ಯನ್ನು ಮಂಡಿಸಿದೆ. ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2024 ರ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್ ಕೂಡ ಆರಂಭದಲ್ಲಿ ಮಸೂದೆಯನ್ನು ವಿರೋಧಿಸಿದರೂ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಸೂದೆಯನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ.
1995 ರ ವಕ್ಫ್ ಕಾನೂನನ್ನು 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ತಿದ್ದುಪಡಿ ಮಾಡಿ, ವಕ್ಫ್‌ಗೆ ಅನುಕೂಲಕರವಾದ ಅಂಶಗಳನ್ನು ಸೇರಿಸಲಾಗಿತ್ತು. ಪ್ರಸ್ತುತ ಸರ್ಕಾರ, ಹೊಸ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ, ಉದಾಹರಣೆಗೆ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವವರು ಮಾತ್ರ ತಮ್ಮ ಆಸ್ತಿಯನ್ನು ವಕ್ಫ್‌ಗೆ ದಾನ ಮಾಡಲು ಸಾಧ್ಯವಾಗುತ್ತದೆ. ದಾನ ಮಾಡಲಾಗುವ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವಿದ್ದರೆ, ತನಿಖೆಯ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.