ರುದ್ರಾಕ್ಷಿ ಬೆಡಗಿ ಮೊನಲಿಸಾ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸೆರೆ: ಅಷ್ಟಕ್ಕೂ ಅವನು ಮಾಡಿದ ಕಿತಾಪತಿ ಏನು?

ಮುಂಬೈ: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ಜೊತೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಸನೋಜ್ ಮಿಶ್ರಾ ಮೇಲೆ ಅತ್ಯಾಚಾರದ ಆರೋಪ ಎದುರಾಗಿದ್ದು, ಇವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

2020ರಲ್ಲಿ ಝಾನ್ಸಿ ಮೂಲದ ಯುವತಿಯನ್ನು ಟಿಕ್​ಟಾಕ್ ಮತ್ತು ಇನ್​ಸ್ಟಾಗ್ರಾಮ್​ ಮೂಲಕ ಸನೋಜ್ ಮಿಶ್ರಾ ಪರಿಚಯ ಮಾಡಿಕೊಂಡಿದ್ದರು. ಬಳಿಕ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದರು. 2021ರ ಜೂನ್ 17ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಸನೋಜ್ ಮಿಶ್ರಾ ಕೇಳಿಕೊಂಡಿದ್ದರು. ಆದರೆ ಆ ಯುವತಿ ನಿರಾಕರಿಸಿದಾಗ, ಒಂದು ವೇಳೆ ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನೋಜ್ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರು ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಭಯದಿಂದ ಮರುದಿನ, ಅಂದರೆ 2021ರ ಜೂನ್ 18ರಂದು ಸನೋಜ್ ಅವರನ್ನು ಆ ಯುವತಿ ಭೇಟಿ ಮಾಡಿದ್ದರು. ಆಕೆಯನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಮತ್ತು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸೆಗಲಾಯಿತು. ಆಕೆಯ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಸನೋಜ್ ಮಿಶ್ರಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ಬಳಿಕ ಹಲವು ಬಾರಿ ಆಕೆಯ ಮೇಲೆ ಸನೋಜ್ ಮಿಶ್ರಾ ದೌರ್ಜನ್ಯ ನಡೆಸಿದ್ದಾರೆ. ಮದುವೆ ಆಗುವುದಾಗಿ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಈ ರೀತಿ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದಾರೆ. ನಿರ್ದೇಶಕನ ಮೇಲೆ ಇಷ್ಟೆಲ್ಲ ಆರೋಪ ಎದುರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಮೊನಾಲಿಸಾ ಅವರು ಕುಂಭಮೇಳದಲ್ಲಿ ಕಾಣಿಸಿಕೊಂಡು ವೈರಲ್ ಆದ ಬಳಿಕ ಅವರನ್ನು ಸಿನಿಮಾದಲ್ಲಿ ಹೀರೋಯಿನ್ ಮಾಡುವುದಾಗಿ ಸನೋಜ್ ಮಿಶ್ರಾ ಭರವಸೆ ನೀಡಿದ್ದರು. ಈಗ ಅವರು ಗಂಭೀರ ಆರೋಪದಲ್ಲಿ ಅರೆಸ್ಟ್ ಆಗಿರುವುದರಿಂದ ಮೊನಾಲಿಸಾ ಭವಿಷ್ಯ ಹಾಳಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!