ಮುತ್ತೂಟ್‌ ಫೈನಾನ್ಸ್‌ ದರೋಡೆ ವಿಫಲಗೊಳಿಸಿದ ಕೋಣಾಜೆ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ

ಉಳ್ಳಾಲ: ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಶೀಘ್ರವಾಗಿ ಬಂಧಿಸಿದ ಕೋಣಾಜೆ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಉಳ್ಳಾಲ ವ್ಯಾಪ್ತಿಯ ಕೆ.ಸಿ. ರೋಡಿನ‌ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು.


ಕೇರಳದ ಕಾಂಞಂಗಾಡ್ ಮೂಲದ ಮುರಳಿ ಮತ್ತು ಕಾಸರಗೋಡು ನಿವಾಸಿ ಹರ್ಷದ್ ಬಂಧಿತ ಆರೋಪಿಗಳು. ಆರೋಪಿಗಳಿಬ್ಬರು ಈ ಹಿಂದೆ ಕೇರಳದಲ್ಲಿ ಬ್ಯಾಂಕ್‌ ದರೋಡೆ ನಡೆಸಿದ ಆರೋಪಿಗಳೆಂದು ತಿಳಿದುಬಂದಿದೆ.
ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಹೆಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಶನಿವಾರ ತಡರಾತ್ರಿ 1.30ರ ಸುಮಾರಿಗೆ ಖದೀಮರು ನುಗ್ಗಿ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿತ್ತು. ಇದು ಮುತ್ತೂಟ್ ಫೈನಾನ್ಸ್ ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದು, ಅದೇ ಕ್ಷಣದಲ್ಲಿ ಕೊಣಾಜೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಈ ವೇಳೆ ದರೋಡೆಕೋರರಾದ ಮುರಳಿ ಮತ್ತು ಹರ್ಷದ್ ಪೊಲೀಸರ ಸೆರೆ ಆಗಿದ್ದು ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ. ಆರೋಪಿಗಳು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಎಸಿಪಿ ಧನ್ಯಾ ನಾಯಕ್, ಕೊಣಾಜೆ ಇನ್ಸ್ ಪೆಕ್ಟರ್ ರಾಜೇಂದ್ರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೈರನ್‌ ಮೊಳಗಿ ಖದೀಮರು ಎಸ್ಕೇಪ್‌ ಆಗುವ ಮುನ್ನವೇ ತಕ್ಷಣ ಆರೋಪಿಗಳನ್ನು ಬಂಧಿಸಿ ಕೋಣಾಜೆ ಠಾಣೆಯ ಪೊಲೀಸರ ಕಾರ್ಯಾಚರಣೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!