ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆಯಲಿರುವ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ರೋಹನ್ ಮೊಂತೇರೋ, ಕನ್ಯಾಡಿ ಸದಾಶಿವ ಶೆಟ್ಟಿ ಮತ್ತು ಎಂ. ಎನ್ ರಾಜೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪಿ. ಎಲ್ ಧರ್ಮ ತಿಳಿಸಿದ್ದಾರೆ.
ರೋಹನ್ ಮೊಂತೇರೋ ಖ್ಯಾತ ಬಿಲ್ಡರ್ ಆಗಿದ್ದು, ಕನ್ಯಾನ ಸದಾಶಿವ ಶೆಟ್ಟಿ ಉದ್ಯಮಿಯಾಗಿದ್ದಾರೆ. ಎಂ. ಎನ್ ರಾಜೇಂದ್ರ ಕುಮಾರ್ ಅವರು ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಲಪತಿ ಪಿ. ಎಲ್ ಧರ್ಮ ಅವರು, 64 ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಗಳು, 54 ಚಿನ್ನದ ಪದಕಗಳು ಮತ್ತು 56 ನಗದು ಬಹುಮಾನಗಳನ್ನು ನೀಡಲಿದೆ ಎಂದರು.
64 ಪಿಹೆಚ್‌ಡಿಗಳಲ್ಲಿ ಕಲೆ – 12, ವಿಜ್ಞಾನ – 38, ವಾಣಿಜ್ಯ – 11 ಮತ್ತು ಶಿಕ್ಷಣ – 3 ಸ್ವೀಕರಿಸುವರಾಗಿದ್ದಾರೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಮತ್ತು ಸಹ – ಕುಲಪತಿ ಡಾ. ಎಂ. ಸಿ ಸುಧಾಕರ್ ಉಪಸ್ಥಿತರಿರುತ್ತಾರೆ ಎಂದರು.
ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಮತ್ತು ಮುಂಬೈನ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿ. ಎನ್ ರಾಜಶೇಖರನ್ ಪಿಳ್ಳೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಬಾರಿಯ ಮುಖ್ಯ ಸಮಾರಂಭದಲ್ಲಿ ಎಲ್ಲಾ ಪಿಹೆಚ್‌ಡಿ ಪದವಿಗಳು ಮತ್ತು ಚಿನ್ನದ ಪದಕಗಳನ್ನು ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಈ ಘಟಿಕೋತ್ಸವದಲ್ಲಿ ಪದವಿ ಪಡೆಯುವ ಎಲ್ಲಾ ಪದವಿಪೂರ್ವ ಅಭ್ಯರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅಡಿ ಮೊದಲ ಉತ್ತೀರ್ಣ ಬ್ಯಾಚ್‌ಗಳಾಗಿದ್ದಾರೆ. ಒಟ್ಟು 25,387 ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ಪದವಿ ಪೂರ್ವ ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ಹಾಜರಾಗಿದ್ದರು. ಇದರಲ್ಲಿ 18,723 (73.75%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ವಿಭಾಗಗಳಲ್ಲಿ 3,331 ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಿದ್ದರು ಮತ್ತು 3,152 (94.63%) ಉತ್ತೀರ್ಣರಾಗಿದ್ದಾರೆ ಎಂದರು.
ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 907 ಹುಡುಗರು, 2,245 ಹುಡುಗಿಯರು ಇದ್ದಾರೆ. ಪದವಿಪೂರ್ವ ವಿಭಾಗಗಳಲ್ಲಿ 22,056 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 15,571 (70.60%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 5,990 ಹುಡುಗರು ಮತ್ತು 9,581 ಹುಡುಗಿಯರು ಇದ್ದಾರೆ ಎಂದು ತಿಳಿಸಿದರು.