ಸೂರಲ್ಪಾಡಿ ಗೋವುಗಳು ಪತ್ತೆ ಪ್ರಕರಣ, ಶರಣ್‌ ಪಂಪ್‌ವೆಲ್‌ ಖಡಕ್‌ ಎಚ್ಚರಿಕೆ

ಮಂಗಳೂರು : ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಗಳು ಹೆಚ್ಚಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿದ್ದಾರೆ. ಗೋ ವಧಾ ಕೇಂದ್ರ ಇಲ್ಲದೇ ಇದ್ದರೂ ಗೋ ಮಾಂಸ ಎಲ್ಲಿಂದ ಬರ್ತಾ ಇದೆ ಎಂದು ಹಿಂದೂ ಸಂಘಟನೆಯ ಪ್ರಮುಖರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸುವ ಮುಖಾಂತರ ನಿಯಂತ್ರಿಸಲು ಪೊಲೀಸರಿಗೆ ಒತ್ತಡ ಹಾಕಿದ್ದರು.

ಆದರೆ ಇದರ ಬೆನ್ನಲ್ಲೇ ಮತ್ತೆ ಮಂಗಳೂರಿನ ಹೊರವಲಯ ಗುರುಪುರ ಕೈಕಂಬದ ಸುರಲ್‌ಪಾಡಿ ಬಳಿ ಮಾ.28ರ ಬೆಳಿಗ್ಗೆ 25 ಗೋವುಗಳನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿ ವಾಹನ ಹಾಗೂ ಗೋವುಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಹೆಚ್‌ಪಿಯ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಈಗಾಗಲೇ ಅಕ್ರಮ ಗೋ ಸಾಗಾಟ ಹಾಗೂ ಗೋ ವಧೆಯನ್ನು ನಿಲ್ಲಿಸಲು ಮನವಿ ಮಾಡಿದ್ದೇವೆ. ಆದ್ರೆ ಗೋ ಸಾಗಟ ಹಾಗೂ ಗೋ ವಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ನಮ್ಮ ಸಂಘಟನೆಯ ಯುವಕರೇ ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ನೀಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಏನೇ ಅಹಿತಕರ ಘಟನೆ ನಡೆದ್ರೂ ಜಿಲ್ಲಾಡಳಿತ ಹಾಗೂ ಪೊಲೀಸರೇ ಜವಾಬ್ದಾರರಾಗಬೇಕಾಗುತ್ತದೆ. ಹೀಗಾಗಿ ಸೂಕ್ತ ರೀತಿಯಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

error: Content is protected !!