ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬಂಧನಕ್ಕೆ ಮನವಿ!

ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬಂಧನಕ್ಕೆ ಮನವಿ!

ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಮಹೇಶ್ ಭಟ್ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ, ಡಿಎಚ್‌ಎಸ್, ಜೆಎಮ್‌ಎಸ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಸ್‌ಎಫ್‌ಐ ದ.ಕ. ಜಿಲ್ಲಾ ಸಮಿತಿಗಳ ಮುಖಂಡರು ದ.ಕ. ಜಿಲ್ಲಾ ಎಸ್ಪಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಆರೋಪಿಯ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಕೂಡ ಆತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಅಲ್ಲದೆ ಈ ಪ್ರಕರಣವು ಸ್ಥಳೀಯವಾಗಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಆರೋಪಿ ಜ.೧೨ರಂದು ತನ್ನ ತೋಟದ ದಲಿತ ಕೂಲಿ ಕಾರ್ಮಿಕನ ಮಗಳಾಗಿರುವ ಎಸ್ಸೆಸ್ಸೆಲ್ಸಿ ಓದುತ್ತಿರುವ ೧೬ ವರ್ಷದ ಬಾಲಕಿಗೆ ಆಮಿಷ ಒಡ್ಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಈ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆಯನ್ನು ಒಡ್ಡಿದ್ದ. ಕಳೆದ ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗದಿರುವುದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಹಾಜರಾಗದಿರುವುದರಿಂದ ಈ ಕುರಿತು ವಿಚಾರಿಸಲು ಶಾಲೆಯ ಶಿಕ್ಷಕರು ಆಕೆಯ ಮನೆಗೆ ತೆರಳಿದ್ದ ವೇಳೆ ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಆಕೆಯನ್ನು ಮಾತನಾಡಿಸಲು ಶಿಕ್ಷಕರಿಗೆ ಪೋಷಕರು ಅವಕಾಶ ಕಲ್ಪಿಸಿಲ್ಲ ಎನ್ನಲಾಗಿದೆ. ಇದು ಯಾವುದೋ ಒತ್ತಡಕ್ಕೆ ಒಳಗಾಗಿರುವ ಸಾಧ್ಯತೆ ಇದೆ. ಅಲ್ಲದೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಮಾತ್ರವಲ್ಲದೆ ಅತ್ಯಾಚಾರವೂ ನಡೆದಿರುವ ಸಾಧ್ಯತೆಗಳಿವೆ ಎಂಬ ಬಲವಾದ ಅನುಮಾನ ಸ್ಥಳೀಯ ಸಾರ್ವಜನಿಕರ ನಡುವೆ ವ್ಯಕ್ತವಾಗುತ್ತಿದೆ. ಮಹೇಶ್ ಭಟ್‌ನಿಂದ ದೌರ್ಜನ್ಯಕ್ಕೊಳಗಾಗಿ ಬಾಲಕಿ ಅಸ್ವ್ವಸ್ಥಗೊಂಡಿರುವುದು, ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದು ನಾಗರಿಕರ ಅನುಮಾನಗಳನ್ನು ಬಲಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ಪಕೊಣಾಜೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತೀ ಬೋಳಾರ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಶ್ಮೀ ವಾಮಂಜೂರು, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿನುಶ ರಮಣ, ಡಿಎಚ್‌ಎಸ್ ಜಿಲ್ಲಾ ಕೋಶಾಧಿಕಾರಿ ರಾಧಕೃಷ್ಣ ಬೊಂಡಂತಿಲ, ಸಂತ್ರಸ್ತ ಬಾಲಕಿಯ ತಂದೆ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಾಧುರಿ ಬೋಳಾರ, ಸುನಿತಾ ತಣ್ಣೀರುಬಾವಿ, ಚಂದ್ರ ಶೇಖರ ಕಿನ್ಯಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!