ನಾಯಿ ಮರಿ ಕಡಿತಕೊಳಗಾದ ಮಹಿಳೆ ವಿಚಿತ್ರವಾಗಿ ವರ್ತಿಸಿ ಸಾವು: ಹಲವರಿಗೆ ನಾಯಿ ಮರಿ ಕಚ್ಚಿರುವ ಶಂಕೆ

ಸುಳ್ಯ: ತಿಂಗಳ ಹಿಂದೆ ನಾಯಿ ಮರಿ ಕಡಿತಕ್ಕೆ ಒಳಗಾಗಿದ್ದ ಮಹಿಳೆ ವಿಚಿತ್ರವಾಗಿ ವರ್ತಿಸಿ ಕೊನೆಗೆ ಸಾ*ವನ್ನಪ್ಪಿದ ಘಟನೆ ಸುಳ್ಯದ ಸಂಪಾಜೆಯಲ್ಲಿ ಸಂಭವಿಸಿದೆ. ನಾಯಿಮರಿ ರೇಬಿಸ್‌ ರೋಗಕ್ಕೆ ತುತ್ತಾಗಿದ್ದು, ಹಲವರಿಗೆ ಕಚ್ಚಿರುವ ಶಂಕೆ ಇರುವುದರಿಂದ ಆತಂಕ ಉಂಟಾಗಿದೆ.

ಸಂಪಾಜೆಯ ಕಲ್ಲುಗುಂಡಿ ಸಮೀಪದ 42 ವರ್ಷ ಪ್ರಾಯದ ಮಹಿಳೆ ಫೆ.7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದಾಗ ಅವರಿಗೆ ನಾಯಿಮರಿಯೊಂದು ಕಚ್ಚಿತ್ತು. ಮರಿಯಾಗಿರುವ ಕಾರಣ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಅಲ್ಲದೆ ಚಿಕಿತ್ಸೆಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ. ಸೋಮವಾರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದ ಆಕೆಯೊಂದಿಗೆ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿದ್ದ ಬಗ್ಗೆ ತಿಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು,. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾ.20ರಂದು ಮೃತಪಟ್ಟರು.

ಮಹಿಳೆ ಆಕೆ ರೇಬಿಸ್‌ ಕಾಯಿಲೆಗೆ ತುತ್ತಾಗಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪರಿಸರದ ಹಲವರಿಗೆ ಹಾಗೂ ಮನೆಯವರಿಗೆ ಎಆರ್‌ವಿ ಲಸಿಕೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್‌ ತಿಳಿಸಿದ್ದಾರೆ. ಮೃತ ಮಹಿಳೆ ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಹಿಳೆಗೆ ಕಚ್ಚಿರುವ ನಾಯಿಮರಿ ಅರಂತೋಡಿನಲ್ಲಿ ಇನ್ನೂ ಕೆಲವರಿಗೆ ಕಚ್ಚಿದೆ ಎನ್ನಲಾಗಿದ್ದು, ಪ್ರಸ್ತುತ ಆ ನಾಯಿ ಪರಿಸರದಲ್ಲಿ ಎಲ್ಲೂ ಕಂಡುಬಂದಿಲ್ಲ. ನಾಯಿ ಕಡಿತಕ್ಕೊಳಗಾದವರು ಸೂಕ್ತ ಲಸಿಕೆ ಪಡೆದುಕೊಳ್ಳುವಂತೆ ತಾಲೂಕು ವೈದ್ಯಾ ಧಿಕಾರಿಗಳು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

error: Content is protected !!