ಮಂಗಳೂರು: ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ರಾಜ್ಯಾದ್ಯಂತ ಇರುವ ಅಭಿಮಾನಿಗಳು ಅಲ್ಲಲ್ಲಿ ಅವರ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಅವರು ನಮ್ಮನ್ನು ಗತಿಸಿ ಮೂರು ವರ್ಷ ಕಳೆದಿದೆ. ಅತ್ಯಂತ ಸರಳತೆ, ಸಮಾಜಮುಖಿ ಕೆಲಸಗಳ ಮೂಲಕ ಮನೆಮಾತಾಗಿದ್ದ ಪುನೀತ್ ಸಾವು ಅವರ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ತೇಲಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾಯುವ ಹಿಂದಿನ ದಿನ ಗಾಯಕ ಗುರುಕಿರಣ್ ನಿವಾಸದಲ್ಲಿ ನಡೆದಿದ್ದ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿ ಆಚರಿಸಿಕೊಂಡ ಕ್ಷಣ, ಕೊನೆಯ ದಿನ ಏನ್ ಆಯ್ತು ಎಂದು ಗಾಯಕ ಗುರುಕಿರಣ್ ಬಹಿರಂಗಪಡಿಸಿದ್ದಾರೆ.
ʻಅಂಬರೀಶ್ ಅಣ್ಣ ಇರಲಿಲ್ಲ ಅಂತ ಎರಡು ವರ್ಷ ಅಪ್ಪು ಹುಟ್ಟುಹಬ್ಬ ಮಾಡಲಿಲ್ಲ. ಹೀಗಾಗಿ ಅಂದು ಎಲ್ಲರೊಟ್ಟಿಗೆ ಅವರು ಬರ್ತ್ ಡೇ ಆಚರಿಸಿಕೊಂಡರು. ಆ ದಿನ ತುಂಬಾನೇ ಚೆನ್ನಾಗಿತ್ತು, ಎಲ್ಲರ ಜೊತೆ ಅಪ್ಪು ಎಂಜಾಯ್ ಮಾಡಿದರು. ಅವರ ಗಂಧದ ಗುಡಿ ಸಣ್ಣ ಪುಟ್ಟ ವಿಡಿಯೋ ತೋರಿಸುತ್ತಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಬೆನ್ನು ನೋವು ಇತ್ತು… ಅದರ ಹೊರತು ಯಾವುದೇ ನೋವಿನ ಬಗ್ಗೆ ಹೇಳಿಕೊಂಡಿರಲಿಲ್ಲ. ತುಂಬಾ ಪಾಸಿಟಿವ್ ಆಂಡ್ ಆಕ್ಟಿವ್ ಆಗಿದ್ದರು. ಕೆಲವರೊಟ್ಟಿಗೆ ಅವರೇ ಹೋಗಿ ಪರಿಚಯ ಮಾಡಿಕೊಂಡು ಮಾತನಾಡಿದರು. ರಾತ್ರಿ ಮಗಳ ಜೊತೆ ರೌಂಡ್ ಹೋಗುತ್ತಾರೆ. ಹೀಗಾಗಿ ಕೇಕ್ ಕಟ್ ಮಾಡಿ ಹೊರಟು ಹೋದರು ಎಂದು ಗುರುಕಿರಣ್ ಖಾಸಗಿ ಟಿವಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
‘ನನಗೆ ಬೆಳಗ್ಗೆ ಫೋನ್ ಬಂತು ಅಪ್ಪು ಇಲ್ಲ ಅಂತ. ಏನೂ ಕ್ಲಾರಿಟಿ ಇಲ್ಲ ಅಂತ. ಈ ರೀತಿ ಗಾಸಿಪ್‌ಗಳು ಇದ್ದೇ ಇರುತ್ತದೆ. ಕಣ್ಣನಲ್ಲಿ ನೋಡಲು ತನಕ ನಂಬಲು ಸಾಧ್ಯವಿಲ್ಲ. ಸ್ನೇಹಿತರಿಗೆ ಕರೆ ಮಾಡಿದೆ ಪೊಲೀಸರು ಬಂದಿದ್ದಾರೆ ಅಂದ್ರು… ಇನ್ನೂ ಸ್ವಲ್ಪ ಭಯ ಶುರುವಾಯ್ತು. ಹಿಂದಿನ ದಿನ ತುಂಬಾ ಚೆನ್ನಾಗಿದ್ದರು. ಈ ರೀತಿ ಯಾರಿಗೂ ಆಗಬಾರದು. ಪ್ರಥಮ ಚಿಕಿತ್ಸೆ ಸರಿಯಾಗಿ ನಡೆದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಅವರಿದಿದ್ದರೆ 50ನೇ ಹುಟ್ಟುಹಬ್ಬ ಆಚರಣೆ ನಡೆಯುತ್ತಿತ್ತು ಮತ್ತಷ್ಟು ಸಿನಿಮಾಗಳು ಬರುತ್ತಿತ್ತು’ ಎಂದು ಗುರು ಕಿರಣ್ ಬಹಿರಂಗಪಡಿಸಿದ್ದಾರೆ.