ಹಳೆಯಂಗಡಿ: ಮೂಲ್ಕಿ ಕಡೆಯಿಂದ ಕಾಲೇಜ್ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರ್ ಗೆ ಎಕ್ಸ್ ಪ್ರೆಸ್ ಬಸ್ ಗುದ್ದಿದ ಹಿನ್ನೆಲೆಯಲ್ಲಿ ಕಾರ್ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಪಕ್ಕದ ತಂತಿಕಂಬ ಮುರಿದು ಮನೆಯ ಅಂಗಳಕ್ಕೆ ನುಗ್ಗಿ ಕಂಪೌಂಡ್ ಗೆ ಗುದ್ದಿ ನಜ್ಜುಗುಜ್ಜಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಕಾರ್ನಾಡ್ ಮೂಲದ ವಿದ್ಯಾರ್ಥಿಗಳಿದ್ದ ಹ್ಯುಂಡೈ ಕಾರ್ ಹಳೆಯಂಗಡಿಯ ಬಿಲ್ಲವ ಸಂಘ ದಾಟುವಾಗ ಹಿಂಬದಿಯಿಂದ ಬರುತ್ತಿದ್ದ ಕೆಎ 19 ಡಿ 9676 ನಂಬ್ರದ ವಿಶಾಲ್ ಖಾಸಗಿ ಬಸ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಕಾರ್ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ತುತ್ತಾಗಿದೆ. ಕಾರ್ ಮುಂಭಾಗದ ಎರಡೂ ಏರ್ ಬ್ಯಾಗ್ ಒಡೆದಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ಮನೆಯ ಕಂಪೌಂಡ್ ಮುರಿದು ಬಿದ್ದು ಹಾನಿ ಸಂಭವಿಸಿದೆ.