“ಕಂಬಳ ಯುವಕರನ್ನು ಪ್ರೀತಿಯಿಂದ ಒಗ್ಗೂಡಿಸುವ ಕ್ರೀಡೆ” -ಗಣೇಶ್ ರಾವ್

ತಿರುವೈಲುಗುತ್ತು ಸಂಕುಪೂಂಜ ದೇವು ಪೂಂಜ ಕಂಬಳಕ್ಕೆ ಚಾಲನೆ

ಮಂಗಳೂರು: ತಿರುವೈಲುಗುತ್ತು ಸಂಕು ಪೂಂಜ ದೇವು ಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ನಡೆಯುವ 13ನೇ ವರ್ಷದ ಕಂಬಳದ ಉದ್ಘಾಟನೆ ಶನಿವಾರ ಮುಂಜಾನೆ ನಡೆಯಿತು.
ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ದೀಪ ಬೆಳಗಿಸುವ ಕಂಬಳಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಮರಸ್ಯಕ್ಕೆ ಮಾದರಿಯಾಗಿ ಸಂಕು ಪೂಂಜ ದೇವು ಪೂಂಜ ಕಂಬಳ ನಡೆಯುತ್ತಿದೆ. ಕಂಬಳ ಎಂದರೆ ಪ್ರೀತಿ ಯುವಕರನ್ನು ಒಂದು ಮಾಡುವ ಕ್ರೀಡೆ. ಇಂದಿನ ಕಾಲದಲ್ಲಿ ಸಂಘಟನೆ ಯುವಕರಿಗೆ ಬೇಕು ಆದರೆ ರಾಜಕೀಯ ಲಾಭಕ್ಕಾಗಿ ಪರಸ್ಪರ ದ್ವೇಷ ಬೆಳೆಸಿಕೊಳ್ಳಬಾರದು. ಅದೇನೇ ದ್ವೇಷ ವೈಮನಸ್ಸು ಇದ್ದರೂ ಕಂಬಳದಂತ ಜಾನಪದ ಕ್ರೀಡೆಯಲ್ಲಿ ಅದೆಲ್ಲವನ್ನೂ ಮರೆತು ಪರಸ್ಪರ ಪ್ರೀತಿ ವಿಶ್ವಾಸದಿಂದ ಒಂದಾಗಬೇಕು. ರಾಜಕೀಯ, ಕೆಲಸ, ಸಂಘಟನೆ ಏನೇ ಇದ್ದರೂ ನಮ್ಮ ಗುರಿ ಸ್ಪಷ್ಟವಾಗಿರಾಬೇಕು. ನಮ್ಮಿಂದ ಯಾರಿಗೂ ಉಪದ್ರ ಆಗಬಾರದು ಎಂಬ ಆಲೋಚನೆ ನಮ್ಮಲ್ಲಿರಬೇಕು. ಇದರಿಂದ ನಮ್ಮ ಸಮಾಜ ದೇಶದ ಅಭಿವೃದ್ಧಿಯಾಗುತ್ತದೆ“ ಎಂದರು.

ಕಂಬಳ ಸಮಿತಿ ಗೌರವಾಧ್ಯಕ್ಷ ಮಿಥುನ್ ರೈ ಮಾತಾಡಿ, “13ನೇ ವರ್ಷದ ಕಂಬಳವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಜನರು ಜಾತಿ ಮತ ಬೇಧ ಮರೆತು ಇಲ್ಲಿ ಸೇರುತ್ತಿದ್ದಾರೆ. ಈ ಬಾರಿ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಂಬಳಕ್ಕೆ ಬಂದಿರುವ ಎಲ್ಲ ಕೋಣಗಳ ಮಾಲಕರಿಗೆ ಧನ್ಯವಾದಗಳು” ಎಂದರು.
ಸಮಿತಿಯ ಗೌರವಾಧ್ಯಕ್ಷ ನವೀನ್ ಚಂದ್ರ ಆಳ್ವ ಮಾತಾಡಿ, “ತಿರುವೈಲುಗುತ್ತು ಕಂಬಳ ಇಂದು ಇಡೀ ಊರಿಗೆ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ತಿರುವೈಲೋತ್ಸವ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಎಲ್ಲರನ್ನೂ ಒಂದು ಮಾಡುತ್ತಿರುವುದು ಖುಷಿಯ ವಿಚಾರ. ಕಂಬಳ ಪ್ರೇಮಿಗಳು ಹೆಚ್ಚೆಚ್ಚು ಪಾಲ್ಗೊಲ್ಲುವ ಮೂಲಕ ನಮ್ಮ ತುಳುನಾಡಿನ ಜಾನಪದ ಕ್ರೀಡೆಯನ್ನು ಇನ್ನಷ್ಟು ಬೆಳೆಸಬೇಕು” ಎಂದರು.
ವೇದಿಕೆಯಲ್ಲಿ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ನಾಗರಾಜ್ ಪಂಡಿತ್, ಉದ್ಯಮಿ ರವೀಂದ್ರ ಶೆಟ್ಟಿ, ಸೀತಾರಾಮ ಜಾನು ಶೆಟ್ಟಿ ತಿರುವೈಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಸುಧೀರ್ ಸಾಗರ್, ಗೋಪಾಲಕೃಷ್ಣ ಭಂಡಾರಿ, ಮನಪಾ ವಿಪಕ್ಷ ನಾಯಕ ಅನಿಲ್ ಪೂಜಾರಿ, ತಿರುವೈಲು ಕಾರ್ಪೊರೇಟರ್ ಹೇಮಲತಾ, ವಿವೇಕ್ ಪೂಜಾರಿ, ಶೆಡ್ಡೆ ಮಂಜುನಾಥ ಭಂಡಾರಿ, ಓಂ ಪ್ರಕಾಶ್ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರತೋಷ್ ಮಲ್ಲಿ, ಚಂದ್ರಹಾಸ್ ರೈ, ಕುಂಞಣ್ಣ ಶೆಟ್ಟಿ, ದೀಪಕ್ ಶೆಟ್ಟಿ, ಜಗದೀಶ್ ಶೆಟ್ಟಿ ಲಿಂಗಮಾರು, ನಾಗರಾಜ್ ಶೆಟ್ಟಿ, ಮಹಾಬಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ಅತಿಥಿಗಳನ್ನು ಸ್ವಾಗತಿಸಿದರು.

error: Content is protected !!