ಮಂಗಳೂರು: ”ಬಹುನಿರೀಕ್ಷಿತ “ಮೀರಾ” ತುಳು ಸಿನಿಮಾದ ಬಿಡುಗಡೆ ದಿನಾಂಕ ಈ ಹಿಂದೆ ಫೆಬ್ರವರಿ 21ಕ್ಕೆ ಘೋಷಿಸಿದ್ದು ಇದೀಗ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ತುಂಬಾ ಚೆನ್ನಾಗಿ ಓಡುತ್ತಿರುವ ಕಾರಣದಿಂದ ನಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಮಾರ್ಚ್ 21ಕ್ಕೆ ಮುಂದೆ ಹಾಕಿದ್ದೇವೆ“ ಎಂದು ಸಿನಿಮಾ ನಿರ್ಮಾಪಕ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಮಾತಾಡಿದ ನಟ ವಿನೀತ್ ಕುಮಾರ್ ಅವರು, ”ತುಳು ಸಿನಿಮಾಗಳಿಗೆ ಸೀಮಿತ ಮಾರುಕಟ್ಟೆ ಇದೆ. ಈ ಕಾರಣದಿಂದ ಸಿನಿಮಾಗಳ ಮಧ್ಯೆ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ಲಂಚುಲಾಲ್ ಮತ್ತವರ ತಂಡ ಈ ನಿರ್ಧಾರ ಮಾಡಿದೆ. ಇದಕ್ಕಾಗಿ ಮೀರಾ ಚಿತ್ರತಂಡಕ್ಕೆ ಅಭಿನಂದನೆಗಳು. ನಮ್ಮದು ಬಿಗ್ ಬಜೆಟ್ ಸಿನಿಮಾವಾಗಿರುವ ಕಾರಣಕ್ಕೆ ಬಹಳಷ್ಟು ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ತುಳುವರು ಎಲ್ಲರೂ ಸಿನಿಮಾ ನೋಡಿ ಎರಡೂ ಸಿನಿಮಾಗಳಿಗೆ ನಿಮ್ಮ ಬೆಂಬಲ ಇರಲಿ“ ಎಂದರು.
ರಾಹುಲ್ ಅಮೀನ್ ಮಾತಾಡಿ, ”ಈಗ ಕಲಾವಿದರ ಸಂಘ ಒಬ್ಬ ಒಳ್ಳೆಯ ಅಧ್ಯಕ್ಷರ ಕೈಯಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಉಂಟುಮಾಡಿದೆ. ಈ ಹಿಂದೆ ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆಯಾದ ಉದಾಹರಣೆ ನಮ್ಮಲ್ಲಿತ್ತು. ಹೀಗಿರುವಾಗ ಸಿನಿಮಾ ಬಿಡುಗಡೆಗೆ ಮೂರು ವಾರ ಇದ್ದರೂ ನಮ್ಮ ಸಿನಿಮಾಕ್ಕೆ ಬೇಕಾಗಿ ತಮ್ಮ ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿರುವುದು ಶ್ಲಾಘನೀಯ. ಇದಕ್ಕಾಗಿ ಲಂಚುಲಾಲ್ ಅವರಿಗೆ ಧನ್ಯವಾದಗಳು“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಧರ್ಮನಗರ, ವಿನೀತ್ ಕುಮಾರ್, ಅಶ್ವಥ್, ಸುಹಾನ್ ಪ್ರಸಾದ್, ಯತೀಶ್ ಪೂಜಾರಿ, ರಾಹುಲ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.