ಸಿಎಂ ಸಿದ್ದರಾಮಯ್ಯರಿಂದ ಕಾರ್ಯಕ್ರಮ ಉದ್ಘಾಟನೆ!
ಸುರತ್ಕಲ್: ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜನವರಿ 24ರಿಂದ 26ರವರೆಗೆ ಸಸಿಹಿತ್ಲು ಕಡಲತಡಿಯಲ್ಲಿ ವಿಶ್ವ ಸಮ್ಮೇಳನ ಹಾಗೂ ಬಿಲ್ಲವ ಸಮುದಾಯದ 26 ಪಂಗಡಗಳ ಸುವರ್ಣ ಸಿರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷರಾದ ತೇಜೋಮಯ ಅವರು ಮಾಹಿತಿ ನೀಡಿದರು.
“1974 ರಲ್ಲಿ ಸಸಿಹಿತ್ಲು ಗ್ರಾಮದ ಅಗ್ಗಿದಕಳಿಯದ ಹಿರಿಯರ ಮುತುವರ್ಜಿಯಲ್ಲಿ ಆರಂಭಗೊಂಡ ನಮ್ಮ ಸಂಸ್ಥೆ ಇಂದು ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸುತ್ತಿದೆ. ವಿಶ್ವದಾದ್ಯಂತ ಇರುವ ಬಿಲ್ಲವರು, ತೀಯರು, ಆರ್ಯ ಈಡೀಗ, ದೀವರು, ನಾಮಧಾರಿಗಳು ಸೇರಿದಂತೆ ಎಲ್ಲಾ 26 ಪಂಗಡಗಳ ವಿಶ್ವ ಸಮ್ಮೇಳನ ನಡೆಯಲಿದೆ, ಅದರೊಂದಿಗೆ ಸಮುದಾಯದ ಯುವ ಮನಸುಗಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪಂಗಡಗಳ ಬಂಧುಗಳಿಗಾಗಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಗೆ ಪ್ರಥಮ ಬಹುಮಾನ 1 ಲಕ್ಷ ರೂಪಾಯಿ, ದ್ವಿತೀಯ 50 ಸಾವಿರ, ತೃತೀಯ 40 ಸಾವಿರ,
ಚತುರ್ಥ 30 ಸಾವಿರ ಮತ್ತು ಪಂಚಮ ಬಹುಮಾನ 20 ಸಾವಿರ ನಗದು ಸಹಿತ ಶಾಶ್ವತ ಫಲಕ ಇದೆ, ಅದರೊಂದಿಗೆ ಭಾಗವಹಿಸಿ ಬಹುಮಾನ ಪಡೆಯದ ತಂಡಗಳಿಗೆ ತಲಾ ಹತ್ತು ಸಾವಿರ ನಗದು ನೀಡಲಾಗುವುದು. ದೇಶ ವಿದೇಶಗಳಿಂದ ಸಮಾಜದ ಬಂಧುಗಳು ಆಗಮಿಸುವ ಕಾರಣದಿಂದ ಅವರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬೀಚ್ ಫೆಸ್ಟಿವನ್, ಬಿಲ್ಲವರ ಜಾನಪದ ಬದುಕಿನ ಪ್ರದರ್ಶನ, ಪುಸ್ತಕ ಮೇಳ, ಎಲ್ಲವನ್ನೂ ಆಯೋಜಿಸಲಾಗಿದೆ. ಮೂರು ದಿನದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ, ವಿಧಾನ ಸಭೆಯ ಸಭಾಧ್ಯಕ್ಷರಾದ ಯುಟಿ ಖಾದರ್ ಸುವರ್ಣಾಕ್ಷರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಾಧಕ ಸಮಾಜ ಬಂಧುಗಳಿಗೆ ನೀಡುವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ದಿನೇಶ್ ಗುಂಡೂರಾವ್ ಹಾಗೂ ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ ಪ್ರದಾನಿಸಲಿದ್ದಾರೆ. ತೆಲಂಗಾಣ ರಾಜ್ಯಪಾಲರಾದ ಸನ್ಮಾನ್ಯ ತಮಿಳ್ ಇಸೈ ಸೌಂದರರಾಜನ್, ಸಚಿವರಾದ ಮಧು ಬಂಗಾರಪ್ಪ, ತೆಲಂಣಗಾಣದ ಸಚಿವರಾದ ಪೊನ್ನಂ ಪ್ರಭಾಕರ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನ ಬೀಚ್ ಫೆಸ್ಟಿವಲ್ ಇದ್ದು ಆಹಾರ ಮೇಳ, ಬೀಚ್ ಡ್ಯಾನ್ಸ್ ಸ್ಪರ್ಧೆ, ಬೀಚ್ ವಾಲಿಬಾಲ್, ತ್ರೋ ಬಾಲ್, ಬೀಚ್ ರಸಮಂಜರಿ ಮುಂತಾದ ಕಾರ್ಯಕ್ರಮ ನಿರಂತರ ನಡೆಯಲಿದೆ“ ಎಂದರು.
ಸ್ವಾಗತ ಸಮಿತಿಯ ಸತ್ಯಜಿತ್ ಸುರತ್ಕಲ್ ಮಾತಾಡಿ, “ಪಕ್ಷ ರಾಜಕೀಯ ರಹಿತವಾಗಿ ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂಬ ಉದ್ದೇಶದಿಂದ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಯುತ್ತಿರುವ ಕಾರ್ಯಕ್ರಮವನ್ನು ಜನವರಿ 25ರ ಶನಿವಾರ ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಜನವರಿ 26ರ ಆದಿತ್ಯವಾರ ಬೆಳಗ್ಗೆ 9 ಗಂಟೆಯಿಂದ ಸಾಂಸ್ಕೃತಿಕ ಸ್ಪರ್ಧೆ ಆರಂಭಗೊಳ್ಳಲಿದ್ದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಕಡಲತಡಿಯಲ್ಲಿ ಸಂಗೀತ ರಸ ರಾತ್ರಿ ಕಾರ್ಯಕ್ರಮ ಜರುಗಲಿದೆ“ ಎಂದರು.
ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಅವರು, “ಜನವರಿ 24, 25, 26ರಂದು ಮೂರು ದಿನಗಳ ಕಾಲ ವಿಶ್ವ ಸಮ್ಮೇಳನ ನಡೆಯಲಿದ್ದು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಕರಾವಳಿ ಆಹಾರ ಮೇಳ, ಜಾನಪದ ವಸ್ತು ಪ್ರದರ್ಶನ, ಪುಸ್ತಕ ಮೇಳ ಜರುಗಲಿದೆ. ಜನವರಿ 24ರ ಸಂಜೆ ಗಂಟೆ 4ಕ್ಕೆ ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಿಂದ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಅದ್ಧೂರಿ ಜಾನಪದ ಮೆರವಣಿಗೆ ನಡೆಯಲಿದೆ. ಸಂಜೆ 5:30ಕ್ಕೆ ಸುವರ್ಣ ಸಂಭ್ರಮ ಧ್ವಜಾರೋಹಣ ನಡೆಯಲಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷರು, ವಿಶ್ವ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾದ ಚಂದಯ್ಯ ಬಿ ಕರ್ಕೇರ, ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯದ ಅಧ್ಯಕ್ಷರು, ವಿಶ್ವ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿ.ಎನ್., ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು, ಸಮ್ಮೇಳನ ಸಮಿತಿ ಕಾರ್ಯದರ್ಶಿ ರಮೇಶ್ ಪೂಜಾರಿ ಚೇಳಾಯಿರು,ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘ, ಪ್ರಧಾನ ಸಂಚಾಲಕರಾದ ನರೇಶ್ ಕುಮಾರ್ ಸಸಿಹಿತ್ಲು, ಕಾರ್ಯದರ್ಶಿ ಸುವರ್ಣ ಮಹೋತ್ಸವ ಸಮಿತಿ, ಸಂಚಾಲಕರು ವಿಶ್ವ ಸಮ್ಮೇಳನ ಸಮಿತಿ ಎಸ್.ಆರ್. ಪ್ರದೀಪ್, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಕೋಶಾಧಿಕಾರಿ ವಸಂತ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷರು ಸರೋಜಿನಿ ಶಾಂತರಾಜ್, ವಿಶ್ವ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕರು ಉದಯ ಬಿ.ಸುವರ್ಣ, ಕೋಶಾಧಿಕಾರಿ ಕಿರಣ್ ಕುಮಾರ್, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಭಾಸ್ಕರ ಕೋಟ್ಯಾನ್, ಪ್ರಚಾರ ಸಮಿತಿಯ ಮುಕೇಶ್, ಮಾಧ್ಯಮ ಸಮಿತಿಯ ಯಶೋಧರ ಕೋಟ್ಯಾನ್ ಮತ್ತಿತರರು
ಉಪಸ್ಥಿತರಿದ್ದರು.