ಸುರತ್ಕಲ್: “ದೈವ ದೇವರ ಹೆಸರಿನಲ್ಲಿ ಉತ್ಸವ ಬ್ರಹ್ಮಕಲಶೋತ್ಸವಗಳ ಕಾರಣದಿಂದ ಗ್ರಾಮಸ್ಥರೆಲ್ಲರೂ ಸಂಘಟನೆಯಾಗುವ ಅತ್ಯುತ್ತಮ ಅವಕಾಶ. ಸತ್ಯ ಧರ್ಮ ಶ್ರದ್ಧೆಯಿಂದ ದೈವ ದೇವರ ಚಾಕರಿ ಮಾಡುವ ಮೂಲಕ ಎಲ್ಲರಿಗೂ ಒಳಿತಾಗಲಿ” ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು. ಅವರು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಾಗಮಂಡಲದ ಅಂಗವಾಗಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಳಿಕ ಮಾತಾಡಿದ ಉಪನ್ಯಾಸಕ ಎಂ.ಬಾಲಕೃಷ್ಣ ಶೆಟ್ಟಿ ಅವರು, “ನಾಗಾರಾಧನೆ ವಿಶ್ವಾದ್ಯಂತ ಕಾಣಸಿಗುತ್ತದೆ. ತುಳುನಾಡು ಕರಾವಳಿಯಲ್ಲಿ ನಾಗಾರಾಧನೆ ಅತ್ಯಂತ ಪ್ರಾಮುಖ್ಯವಾಗಿದ್ದು ನಾಗಬನಗಳು ಆಧುನಿಕತೆಯಿಂದಾಗಿ ಅಂದಗೆಡುತ್ತಿವೆ. ಬನಗಳನ್ನು ನಾಗಗಳಿಗೆ ಅಹಿತವಾಗುವಂತೆ ನಿರ್ಮಿಸುವುದನ್ನು ನಿಲ್ಲಿಸೋಣ” ಎಂದು ಹೇಳಿದರು.
ದೈವ ದೇವಸ್ಥಾನಗಳಲ್ಲಿ ಭಕ್ತರು ಕೆಟ್ಟ ಚಿಂತನೆ ಇಲ್ಲದೆ ನಿಜ ಭಕ್ತಿಯಿಂದ ಅರ್ಹ ಉಡುಗೆ ತೊಟ್ಟು ಹೋಗಬೇಕು. ಅರ್ಚಕರು ನಿಸ್ವಾರ್ಥ ಭಕ್ತಿಯಿಂದ ಅರ್ಚಿಸಿದಾಗ ಅಲ್ಲಿನ ಸಾನ್ನಿಧ್ಯ ಹೆಚ್ಚುತ್ತದೆ ಎಂದು ಹೇಳಿದರು.
ಡಾ. ಹರಿಕೃಷ್ಣ ಪುನರೂರು ಮಾತನಾಡಿ
ನಾಗಗಳಿಗೆ ಬನ ನಿರ್ಮಿಸಿ ಬದಲಾಗಿ ಗುಡಿ ಕಟ್ಟಬೇಡಿ. ಗಿಡಗಳನ್ನು ನೆಟ್ಟು ಬನಗಳನ್ನು ಅಭಿವೃದ್ಧಿಪಡಿಸಿ. ನಾಗಪಾತ್ರಿಗಳಲ್ಲಿ ನಾನೇ ಎಷ್ಟೋ ಸಲ ಹೇಳಿದ್ದು ಇದೆ, ಭಕ್ತರಿಗೆ ನೈಜ ನಾಗಬನ ನಿರ್ಮಿಸಲು ಹೇಳಿ ಎಂದು. ದಾನಧರ್ಮ ಮಾಡಿ ಆತ್ಮಸಂತೋಷಿಗಳಾಗಿ ಎಂದು ಪುನರೂರು ಹೇಳಿದರು.
ಜೀರ್ಣೋದ್ಧಾರಕ್ಕೆ ಸಹಕರಿಸಿ ದಾನಿಗಳನ್ನು ಗೌರವಿಸಲಾಯಿತು.
ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಐಡಿಯಲ್ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಶಿಬರೂರು ಮುಕುಂದ್ ಕಾಮತ್, ಮೂಡುಬಿದ್ರೆ ಶ್ರೀಪತಿ ಭಟ್, ನಾರಾಯಣ ಪಿ.ಎಂ, ಪ್ರಕಾಶ್ ಬಿ.ಎನ್, ಡಾ. ಅಣ್ಣಯ್ಯ ಕುಲಾಲ್, ವೇಣುಗೋಪಾಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು. ಪ್ರದ್ಯುಮ್ನ ರಾವ್, ಚೆನ್ನಪ್ಪ ಶೆಟ್ಟಿ, ಗಣೇಶ್ ಶೆಟ್ಟಿ, ಕಾಂತಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಮತ್ತಿತರರಿದ್ದರು.
ಸಂತೋಷ್ ಸುವರ್ಣ ಸ್ವಾಗತಿಸಿದರು. ವಿಜೇಶ್ ಶೆಟ್ಟಿ ಸಂಮಾನಿತರ ವಿವರ ನೀಡಿದರು. ಅಮಿತಾ ಸುದೀಪ್ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.
ನಾಗೇಶ ಬಪ್ಪನಾಡು ಅವರಿಂದ ನಾದಸ್ವರ ವಾದನ, ಕಾರ್ತಿಕ್ ರಾವ್ ಬಳಗದವರಿಂದ ಭಕ್ತಿಗೀತೆಗಳ ಗಾಯನ, ಗಣೇಶ್ ಪಾಟೀಲ್ ಅವರಿಂದ ಹರಿಕಥೆ. ಶಿಬರೂರು ಮಹಿಳಾ ಮಂಡಳಿಯವರಿಂದ ನಾಟಕ ಬಾಲೆಗ್ ಒಲಿಯಿನ ಭ್ರಾಮರಿ ಪ್ರದರ್ಶನಗೊಂಡಿತು. ಧ್ಬಜಾಧಿವಾಸ ಧ್ಬಜಕಲಶಗಳು ನಡೆದು ಇಂದು ಬುಧವಾರ ನಾಗದೇವರಿಗೆ ಬ್ರಹ್ಮಕಲಶಾಭಿಷೇಕ, ಧ್ಬಜ ಪ್ರತಿಷ್ಟೆ ಕಲಾಶಭಿಷೇಕ ನಡೆಯಲಿದೆ.